ಛತ್ತೀಸ್‌ಗಢ: ಪಾನ್ ಮಸಾಲ, ಗುಟ್ಕಾ, ಮದ್ಯದ ಜೊತೆಗೆ ನಾನ್ ವೆಜ್ ತಿನ್ನುವ ಮೂಲಕ ಪತಿಗೆ ಕಿರುಕುಳ ನೀಡಿದರೆ ಅದು ಕ್ರೌರ್ಯ ಎಂದು ಛತ್ತೀಸಗಢ ಹೈಕೋರ್ಟ್ ಹೇಳಿದೆ.
ಪತಿ ಸಲ್ಲಿಸಿದ ವಿಚ್ಛೇದನ ಅರ್ಜಿಯನ್ನು ಮಾನ್ಯ ಮಾಡಿದ ನ್ಯಾಯಮೂರ್ತಿ ಗೌತಮ್ ಭಾದುರಿ ಮತ್ತು ನ್ಯಾಯಮೂರ್ತಿ ರಾಧಾಕಿಶನ್ ಅಗರ್ವಾಲ್ ಅವರ ಪೀಠ ಈ ರೀತಿ ಹೇಳಿದೆ.
ಕೊರ್ಬಾ ಜಿಲ್ಲೆಯ ಬಂಕಿಮೊಂಗ್ರಾದಲ್ಲಿ ವಾಸಿಸುವ ಯುವಕನು ಕತ್ಘೋರಾದ ಹುಡುಗಿಯನ್ನು ಮದುವೆಯಾಗಿದ್ದನು. ಮದುವೆಯಾದ ಬಳಿಕ ತನ್ನ ಪತ್ನಿ ಈ ಎಲ್ಲಾ ಚಟಗಳಿಗೆ ದಾಸಿಯಾಗಿರುವುದು ತಿಳಿಯಿತು. ಇವುಗಳನ್ನು ಬಿಡುವಂತೆ ಕುಟುಂಬಸ್ಥರು ಹೇಳಿದರೂ ಪ್ರಯೋಜನ ಆಗಲಿಲ್ಲ. ಮಾತ್ರವಲ್ಲದೇ ಆಕೆ ಗುಟ್ಕಾ ತಿಂದ ನಂತರ ಮಲಗುವ ಕೋಣೆಯಲ್ಲಿ ಎಲ್ಲಿ ಬೇಕಾದರೂ ಉಗುಳುತ್ತಿದ್ದಳು.
ಪತಿಯೊಂದಿಗೆ ಜಗಳವಾಡುತ್ತಿದ್ದಳು. ಇದರಿಂದ ಬೇಸತ್ತ ಪತಿ ವಿಚ್ಛೇದನ ಕೋರಿ ಕೌಟುಂಬಿಕ ಕೋರ್ಟ್ ಮೊರೆ ಹೋಗಿದ್ದರು. ಆದರೆ ಅಲ್ಲಿ ಅವರಿಗೆ ವಿಚ್ಛೇದನ ನೀಡಲು ಕೋರ್ಟ್ ನಿರಾಕರಿಸಿತ್ತು. ಈ ಹಿನ್ನೆಲೆಯಲ್ಲಿ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಈ ರೀತಿ ಮಾಡುವುದು ಪತಿಗೆ ನೀಡುವ ಮಾನಸಿಕ ಕ್ರೌರ್ಯ ಎಂದ ಕೋರ್ಟ್ ವಿಚ್ಛೇದನಕ್ಕೆ ಅನುಮತಿ ನೀಡಿದೆ.