ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆರೋಗ್ಯಕರವಾದದ್ದನ್ನು ತಿನ್ನುವಂತೆ ವೈದ್ಯರು ಸಲಹೆ ನೀಡ್ತಾರೆ. ಅದೇ ರೀತಿ ರಾತ್ರಿ ಕೂಡ ಹೆಲ್ದಿ ಫುಡ್ಸ್ ಮಾತ್ರ ನೀವು ಸೇವಿಸಬೇಕು. ರಾತ್ರಿ ಆರೋಗ್ಯಕರ ಆಹಾರವನ್ನು ಸೇವಿಸದಿದ್ದರೆ ಅದು ನಮ್ಮ ಜೀರ್ಣಕ್ರಿಯೆಯ ಪ್ರಕ್ರಿಯೆಗೆ ಅಡ್ಡಿಯಾಗಬಹುದು.
ಇದಲ್ಲದೆ ನಿದ್ರಾಹೀನತೆ, ಮಲಬದ್ಧತೆ, ಗ್ಯಾಸ್ ಇತ್ಯಾದಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ರಾತ್ರಿ ಅನಾರೋಗ್ಯಕರ ಅಥವಾ ಹೆವಿಯಾದ ತಿನಿಸುಗಳನ್ನು ತಿಂದರೆ ಹೊಟ್ಟೆಯಲ್ಲಿ ಬಾಧೆ ಶುರುವಾಗುವ ಅಪಾಯವೂ ಇರುತ್ತದೆ. ಯಾವ್ಯಾವ ತಿನಿಸುಗಳನ್ನು ರಾತ್ರಿ ಸೇವನೆ ಮಾಡದೇ ಇರುವುದು ಉತ್ತಮ ಅನ್ನೋದನ್ನು ನೋಡೋಣ.
ರಾತ್ರಿ ಭೂರಿ ಭೋಜನ ಮಾಡುವುದು ಸೂಕ್ತವಲ್ಲ. ಅತಿಯಾಗಿ ತಿನ್ನುವುದರಿಂದ ಹೊಟ್ಟೆ ಭಾರವಾಗುತ್ತದೆ. ಇದರಿಂದ ಗ್ಯಾಸ್, ಹೊಟ್ಟೆ ನೋವಿನಂತಹ ಸಮಸ್ಯೆಗಳು ಉಂಟಾಗುತ್ತವೆ. ಚೀಸ್ ಹಾಕಿದ ಜಂಕ್ ಫುಡ್‌ಗಳಾದ ಬರ್ಗರ್, ಪಿಜ್ಜಾ ಇತ್ಯಾದಿಗಳನ್ನು ರಾತ್ರಿ ತಿನ್ನುವುದನ್ನು ತಪ್ಪಿಸಬೇಕು. ಏಕೆಂದರೆ ಇವೆಲ್ಲ ಜೀರ್ಣವಾಗಲು ಸಮಯ ತೆಗೆದುಕೊಳ್ಳುತ್ತವೆ.
ಹೆಚ್ಚಿನವರು ರಾತ್ರಿಯಲ್ಲಿ ಮಾತ್ರ ಮದ್ಯಪಾನ ಮಾಡುತ್ತಾರೆ. ಆದರೆ ಮದ್ಯ ಸೇವನೆ ಆರೋಗ್ಯಕ್ಕೆ ಹಾನಿಕರ. ಅದರಲ್ಲೂ ರಾತ್ರಿ ಆಲ್ಕೋಹಾಲ್ ಸೇವಿಸಿದ್ರೆ ನಿದ್ರೆಗೆ ಅಡ್ಡಿಪಡಿಸುತ್ತದೆ. ರಾತ್ರಿಯಲ್ಲಿ ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ತ್ಯಜಿಸಬೇಕು.ರಾತ್ರಿ ಊಟಕ್ಕೆ ಮಸಾಲೆಯುಕ್ತ ಆಹಾರವನ್ನು ಸೇವಿಸುವುದು ಒಳ್ಳೆಯದಲ್ಲ.
ಅತಿಯಾದ ಖಾರ ಹಾಗೂ ಮಸಾಲೆಯುಕ್ತ ಆಹಾರವು ನಿದ್ರೆ ಮತ್ತು ಜೀರ್ಣಾಂಗ ವ್ಯವಸ್ಥೆಗೆ ಅಡ್ಡಿಪಡಿಸುತ್ತದೆ. ಆದ್ದರಿಂದ ರಾತ್ರಿ ಕಡಿಮೆ ಮಸಾಲೆ ಇರುವ ಲೈಟ್ ಫುಡ್ ತೆಗೆದುಕೊಳ್ಳಿ. ಇದಲ್ಲದೆ ಗ್ಯಾಸ್ಟ್ರಿಕ್‌ಗೆ ಕಾರಣವಾಗುವಂತಹ ಪದಾರ್ಥಗಳನ್ನು ಕೂಡ ರಾತ್ರಿ ತಿನ್ನಬಾರದು. ಏಕೆಂದರೆ ರಾತ್ರಿ ಅಂತಹ ಆಹಾರವನ್ನು ಜೀರ್ಣಿಸಿಕೊಳ್ಳಲು ಕಷ್ಟವಾಗುತ್ತದೆ. ಹೆಚ್ಚು ಫೈಬರ್ ಹೊಂದಿರುವ ಆಹಾರ ಕೂಡ ಗ್ಯಾಸ್ ಉಂಟುಮಾಡಬಹುದು. ಆದ್ದರಿಂದ ರಾತ್ರಿ ಡ್ರೈಫ್ರೂಟ್ಸ್, ಬೀನ್ಸ್, ಕೋಸುಗಡ್ಡೆ, ಹೂಕೋಸು, ಮೊಳಕೆ ಕಾಳು ಮುಂತಾದವುಗಳನ್ನು ತಿನ್ನಬೇಡಿ.