ಬಿಹಾರದ ಹಾಜಿಪುರದಲ್ಲಿ ವ್ಯಕ್ತಿಯೊಬ್ಬ ತನ್ನ ಮಗಳನ್ನು ಅಪಹರಿಸಲಾಗಿದೆ ಎಂದು ಎಫ್‌ಐಆರ್ ದಾಖಲಿಸಿದ ನಂತರ, ಅವರ ಮಗಳು ನಾನು ಮದುವೆಯಾಗಿದ್ದೀನಿ, ನಮಗೆ ತೊಂದರೆ ಕೊಡಬೇಡಿ ಎಂದು ತನ್ನ ಫೇಸ್ಬುಕ್ ಖಾತೆಯಲ್ಲಿ ಸ್ಟೇಟಸ್ ಹಾಕಿದ್ದಾಳೆ.
ಈ ಹುಡುಗಿ ಮೂಲತಃ ಮಲಿಕ್‌ಪುರದವಳಾಗಿದ್ದು, ಆಕೆಯ ತಂದೆ ತನ್ನ ಮಗಳನ್ನು ಅಪಹರಣ ಮಾಡಲಾಗಿದೆ ಎಂದು ಗೋರೌಲ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ. ತನ್ನ ಪ್ರೇಮಿಯೊಂದಿಗೆ ಓಡಿ ಹೋಗಿ ಮದುವೆಯಾಗಿರುವ ಈಕೆಗೆ, ಪ್ರಕರಣ ದಾಖಲಿಸಿರುವುದು ತಿಳಿಯುತ್ತಿದ್ದಂತೆ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋ ಪೋಸ್ಟ್ ಮಾಡಿದ್ದಾಳೆ.
ವಿಡಿಯೋದಲ್ಲಿ ತಾನು ಮದುವೆಯಾಗಿರುವುದನ್ನು ತಿಳಿಸಿ, ‘ಅಪ್ಪಾ ನಮಗೆ ತೊಂದರೆ ಕೊಡಬೇಡಿ’ ಎಂದು ಮನವಿ ಮಾಡಿಕೊಂಡಿದ್ದಾಳೆ. ಈ ವೇಳೆ ನನ್ನ ಅಪಹರಣವಾಗಿಲ್ಲ, ನಾನು ಸ್ವ ಇಚ್ಛೆಯಿಂದ ಮದುವೆಯಾಗಿದ್ದೇನೆ. ಈಗ ನಾನು ಸಂತೋಷವಾಗಿದ್ದೇನೆ. ದಯವಿಟ್ಟು ನನಗೆ ತೊಂದರೆ ಕೊಡಬೇಡಿ ಎಂದು ಕೇಳಿಕೊಂಡಿದ್ದಾಳೆ. ಜೊತೆಗೆ ಪೊಲೀಸರ ಸಹಾಯವನ್ನು ಕೇಳಿದ್ದಾಳೆ.
ಸದ್ಯ ಈ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದ್ದು, ವ್ಯಾಪಕವಾಗಿ ಶೇರ್ ಆಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಹುಡುಗಿ ಮದುವೆಯಾಗಿದ್ದೇನೆ ಎಂದಿರುವ ಹುಡುಗನು ಕಾಣಿಸಿಕೊಂಡಿದ್ದಾನೆ. ಒಟ್ಟಿನಲ್ಲಿ, ನನ್ನ ಮಗಳ ಅಪಹರಣವಾಗಿದೆ ಎಂದು ತಂದೆ ಕೊಟ್ಟಿರುವ ದೂರಿನ ಎಫ್ಐಆರ್ ಹಾಗೂ ನನ್ನ ಅಪಹರಣವಾಗಿಲ್ಲ ಎಂದು ಹುಡುಗಿ ಮಾಡಿರುವ ವಿಡಿಯೋ ಎರಡು ಪೊಲೀಸರ ಮುಂದೆ ಇದೆ. ಈಗ ಪೊಲೀಸರು ಯಾವ ಕ್ರಮ ಕೈಗೊಳ್ಳುತ್ತಾರೆ ಎನ್ನುವುದೇ ಪ್ರಶ್ನೆ.