ಬಳ್ಳಾರಿ : ಡೆಂಗ್ಯು, ಚಿಕೂನ್ ಗುನ್ಯಾ ರೋಗ ನಿಯಂತ್ರಣಕ್ಕಾಗಿ, ಬಳಕೆಗೆ ನೀರು ತುಂಬುವ ಪರಿಕರಗಳಿಗೆ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸಾರ್ವಜನಿಕರು ಸೊಳ್ಳೆ ಉತ್ಪತ್ತಿಯಾಗದಂತೆ ನಿಗಾವಹಿಸಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವೈ ರಮೇಶಬಾಬು ಅವರು ಹೇಳಿದರು.
ಮನೆಗೆ ಬಳಸಲು ನೀರು ಅತ್ಯಗತ್ಯವಾಗಿದ್ದು, ನೀರು ತುಂಬುವ ಪರಿಕರಗಳಾದ ಡ್ರಮ್, ಬ್ಯಾರಲ್, ಸಿಮೆಂಟ್ ತೊಟ್ಟಿ, ಮಣ್ಣಿನ ಮಡಿಕೆಗಳಿಗೆ ನೀರು ತುಂಬಿದ ನಂತರ ಸರಿಯಾಗಿ ಮುಚ್ಚಳ ಮುಚ್ಚುವ ಮೂಲಕ ಸೊಳ್ಳೆಗಳು ಮೊಟ್ಟಯಿಡಲು ನೀರು ಸಿಗದಂತೆ ಜಾಗ್ರತೆ ವಹಿಸಬೇಕು ಎಂದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣ ಕಾರ್ಯಕ್ರಮ ವಿಭಾಗದಡಿ ಪ್ರಾಥಮಿಕ ಆರೋಗ್ಯ ಕೇಂದ್ರ ತಾಳೂರು ಸಹಯೋಗದಲ್ಲಿ ತಾಳೂರು ಗ್ರಾಮದಲ್ಲಿ ಸೊಳ್ಳೆಗಳ ಮರಿ (ಲಾರ್ವಾ) ಪತ್ತೆ ಹಚ್ಚುವ ಕಾರ್ಯಕ್ರಮನ್ನು ಪರಿಶೀಲಿಸಿ, ಜಾಗೃತಿ ಮೂಡಿಸಿದರು.
ಸೊಳ್ಳೆಗಳ ಕಚ್ಚುವಿಕೆಯಿಂದ ಹರಡುವ ಡೆಂಗ್ಯು, ಚಿಕನ್ಗುನ್ಯಾ ಸೇರಿದಂತೆ ಮಲೇರಿಯಾ, ಆನೆಕಾಲು ಮುಂತಾದ ರೋಗಗಳ ನಿಯಂತ್ರಣಕ್ಕೆ ಎಲ್ಲರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.ಮುಂಜಾಗ್ರತಾ ಕ್ರಮವಾಗಿ ಮನೆ ಸುತ್ತಮುತ್ತ ಸ್ವಚ್ಛತೆಯನ್ನು ಕಾಪಾಡಬೇಕು, ನೀರು ನಿಲ್ಲುವ ತಾಣಗಳನ್ನು ಮಣ್ಣು ಹಾಕಿ ಮುಚ್ಚಬೇಕು, ನೀರು ನಿಲ್ಲುವ ಟೈರ್, ಟಿನ್, ಪ್ಲಾಸ್ಟಿಕ್ ಕಫ್ಗಳನ್ನು ಸೂಕ್ತ ವಿಲೇವಾರಿ ಮಾಡಬೇಕು ಎಂದು ಸೂಚಿಸಿದರು.