ಹೊಸಪೇಟೆ: ರೈತರಿಗೆ ಕತ್ತೆಗಳನ್ನು ನೀಡಿ ಅವರಿಂದ ಹಾಲು ಖರೀದಿಸುವ ವ್ಯವಹಾರ ನಡೆಸುತ್ತಿದ್ದ ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ 60ಕ್ಕೂ ಅಧಿಕ ಮಂದಿ ಹೊಸಪೇಟೆ ನಗರ ಠಾಣೆಗೆ ದೂರು ನೀಡಿದ್ದಾರೆ. ರಾಜ್ಯದ ವಿವಿಧೆಡೆಯಿಂದ ಇಲ್ಲಿಗೆ ಬಂದು ಅನೇಕರು ದೂರು ಸಲ್ಲಿಸುತ್ತಿದ್ದಾರೆ. ಮುಖ್ಯ ಆರೋಪಿಯಾಗಿರುವ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ನೂತಲಪತಿ ಮುರುಳಿ ನಾಪತ್ತೆಯಾಗಿದ್ದು, ಅವರಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ.
ಸುಮಾರು 300 ಮಂದಿ ವ್ಯವಹಾರದಲ್ಲಿ ಹಣ ತೊಡಗಿಸಿರುವ ಮಾಹಿತಿ ಇದ್ದು, ಈಗಾಗಲೇ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ಮೂರು ತಂಡಗಳನ್ನು ರಚಿಸಲಾಗಿದೆ. ಹೊಸಪೇಟೆ ನಗರ ಠಾಣೆಯಲ್ಲಿ ಗುರುವಾರ ರಾತ್ರಿ 9 ಗಂಟೆಗೆ ಮಲ್ಲೇಶಪ್ಪ ಎಂಬುವರು ಜೆನ್ನಿ ಮಿಲ್ಕ್ ಕಂಪನಿ ವಿರುದ್ಧ ದೂರು ನೀಡಿದ್ದಾರೆ. ಮೋಸ ಹೋಗಿರುವ ಬಗ್ಗೆ ಇನ್ನಷ್ಟು ಜನ ದೂರು ನೀಡಲು ಬರುತ್ತಿದ್ದು, ಪ್ರತ್ಯೇಕ ಕೌಂಟರ್ ಗಳನ್ನು ತೆರೆದು ದೂರು ಸ್ವೀಕರಿಸಲಾಗುತ್ತಿದೆ ಎಂದು ಎಸ್ಪಿ ಶ್ರೀಹರಿಬಾಬು ಬಿ.ಎಲ್. ತಿಳಿಸಿದ್ದಾರೆ.
ಸುಮಾರು ಆರು ತಿಂಗಳಿಂದ ಕಂಪನಿ ವ್ಯವಹಾರ ನಡೆಸುತ್ತಿದ್ದು, ಕೆಲವು ದಿನಗಳ ಹಿಂದೆ ರೈತ ಸಂಘ, ಹಸಿರು ಸೇನೆ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಸೆ. 17ರಂದು ನಗರಸಭೆ ಅಧಿಕಾರಿಗಳು ಕಚೇರಿಗೆ ತೆರಳಿ ವ್ಯಾಪಾರ ಪರವಾನಿಗೆ ಇಲ್ಲದ ಕಾರಣ ಕಚೇರಿಯನ್ನು ಮುಚ್ಚಿಸಿದ್ದರು.
ಸುಮಾರು 300 ಮಂದಿ ಕತ್ತೆಗಾಗಿ 10 ಕೋಟಿ ರೂ. ಪಾವತಿಸಿದ್ದಾರೆ. ಇವರಲ್ಲಿ 200 ಮಂದಿಗೆ ಕತ್ತೆ ನೀಡಲಾಗಿದೆ. ಕತ್ತೆ ಹಾಲು ಮಾರಾಟ ಮಾಡಿದ ಕೆಲವರಿಗೆ ಹಣ ಕೂಡ ನೀಡಲಾಗಿದೆ. ಈ ನಡುವೆ ಗ್ರಾಹಕರಿಗೆ ಕಂಪನಿಯ ಎಂಡಿ ನೂತಲಪತಿ ಮುರುಳಿ ಪತ್ರ ಬರೆದು, ತಾವು ಗ್ರಾಹಕರಿಗೆ ಮೋಸ ಮಾಡಿಲ್ಲ. ಹೊಸಪೇಟೆ ಕಚೇರಿ ಮುಚ್ಚಿದ್ದರಿಂದ ಗ್ರಾಹಕರು ದೂರವಾಗಿದ್ದಾರೆ. ಗ್ರಾಹಕರಿಗೆ ಈಗಾಗಲೇ ನಾಲ್ಕು ಕೋಟಿ ರೂಪಾಯಿ ಕೊಟ್ಟಿದ್ದೇನೆ. ಮ್ಯಾನೇಜರ್ ನನಗೆ ಮೋಸ ಮಾಡಿದ್ದು, ಭಾರಿ ನಷ್ಟವಾಗಿದೆ ಎಂದು ತಿಳಿಸಿದ್ದಾರೆ ಎನ್ನಲಾಗಿದೆ.