ನಂಜನಗೂಡು ಶ್ರೀಕಂಠೇಶ್ವರ ದೇವಾಲಯ ದಕ್ಷಿಣ ಕಾಶಿ ಎಂದೇ ಹೆಸರುವಾಸಿಯಾಗಿದೆ. ಈ ದೇವಾಲಯದಲ್ಲಿ ಒಂದೂವರೆ ತಿಂಗಳಲ್ಲಿ ದಾಖಲೆಯ 1.98 ಕೋಟಿ ರೂಪಾಯಿ ಕಾಣಿಕೆ ಸಂಗ್ರಹವಾಗಿದೆ.
ದೇವಾಲಯದ 31 ಹರಕೆ ಹುಂಡಿಗಳಲ್ಲಿ 77 ಗ್ರಾಂ ಚಿನ್ನ, 5.7 ಕೆಜಿ ಬೆಳ್ಳಿ, 16 ವಿದೇಶಿ ಕರೆನ್ಸಿ ಸೇರಿದಂತೆ 1.98 ಕೋಟಿ ರೂ. ಸಂಗ್ರಹವಾಗಿದೆ. ಹುಂಡಿಯಲ್ಲಿ ಅಮಾನ್ಯಗೊಂಡ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳು ಕೂಡ ಕಂಡುಬಂದಿವೆ. ಇದು ಇದುವರೆಗೆ ಸಂಗ್ರಹವಾದ ಕಾಣಿಕೆಯಲ್ಲಿಯೇ ಅತಿ ಹೆಚ್ಚಿನ ಮೊತ್ತ ಎಂದು ಹೇಳಲಾಗಿದೆ.
ಕೊರೋನಾ ನಂತರ ದೇವಾಲಯಗಳ ದರ್ಶನಕ್ಕೆ ಅವಕಾಶ ಕಲ್ಪಿಸಿದ್ದು, ಭಕ್ತರ ಸಂಖ್ಯೆ ಹೆಚ್ಚಾಗಿದೆ. ಕಾರ್ತಿಕ ಮಾಸದಲ್ಲಿ ದೇವಾಲಯಗಳಿಗೆ ಹೆಚ್ಚಿನ ಸಂಖ್ಯೆಯ ಭಕ್ತರು ಭೇಟಿ ನೀಡಿದ್ದಾರೆ. ಈ ವೇಳೆ ಭಕ್ತರಿಂದ ಹೆಚ್ಚಿನ ಪ್ರಮಾಣದಲ್ಲಿ ಕಾಣಿಕೆ ಸಂಗ್ರಹವಾಗಿದೆ.