
ಸಾಮಾಜಿಕ ಕಾರ್ಯಗಳಿಗೆ ದೇಣಿಗೆ ನೀಡುವ ವಿಚಾರದಲ್ಲಿ ಎಚ್ ಸಿ ಎಲ್ ಟೆಕ್ನಾಲಜಿಸ್ ನ ಶಿವ ನಾಡರ್ ಪ್ರಥಮ ಸ್ಥಾನದಲ್ಲಿದ್ದು, ಸರಾಸರಿ ದಿನಕ್ಕೆ 3 ಕೋಟಿ ರೂಪಾಯಿಗಳಂತೆ ಅವರು ಒಟ್ಟು 1,161 ಕೋಟಿ ರೂಪಾಯಿ ದೇಣಿಗೆ ನೀಡಿದ್ದಾರೆ.
ಹುರೂನ್ ಇಂಡಿಯಾ ಟಾಪ್ ಟೆನ್ ದೇಣಿಗೆದಾರರ ಪಟ್ಟಿ ಬಿಡುಗಡೆ ಮಾಡಿದ್ದು, ಶಿವನಡರ್ ನಂತರದ ಸ್ಥಾನದಲ್ಲಿ ವಿಪ್ರೋ ಟೆಕ್ನಾಲಜಿಸ್ ನ ಅಜೀಮ್ ಪ್ರೇಮ್ ಜಿ ಇದ್ದಾರೆ. ಇವರು 484 ಕೋಟಿ ರೂಪಾಯಿಗಳನ್ನು ದೇಣಿಗೆ ನೀಡಿದ್ದು ಈ ಮೊದಲು ಪ್ರಥಮ ಸ್ಥಾನದಲ್ಲಿದ್ದ ಇವರು ಒಂದು ಸ್ಥಾನ ಕುಸಿದು ದ್ವಿತೀಯ ಸ್ಥಾನದಲ್ಲಿದ್ದಾರೆ.
411 ಕೋಟಿ ರೂಪಾಯಿಗಳ ದೇಣಿಗೆಯೊಂದಿಗೆ ಮೂರನೇ ಸ್ಥಾನದಲ್ಲಿ ಮುಕೇಶ್ ಅಂಬಾನಿ ಮತ್ತು ಕುಟುಂಬ, 242 ಕೋಟಿ ರೂಪಾಯಿ ದೇಣಿಗೆಯೊಂದಿಗೆ ಕುಮಾರ ಮಂಗಳಂ ಬಿರ್ಲಾ ಮತ್ತು ಕುಟುಂಬ ನಾಲಕ್ಕನೇ ಸ್ಥಾನದಲ್ಲಿದೆ.
ಇನ್ನು ಸುಶ್ಮಿತಾ ಮತ್ತು ಸುಬ್ರೋತೋ ಬಾಗ್ಚಿ 23 ಕೋಟಿ ರೂಪಾಯಿ ದೇಣಿಗೆಯೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದು, ಇಷ್ಟೇ ಮೊತ್ತದ ದೇಣಿಗೆಯೊಂದಿಗೆ ರಾಧಾ ಮತ್ತು ಎನ್ ಎಸ್ ಪಾರ್ಥಸಾರಥಿ ಐದನೇ ಸ್ಥಾನದಲ್ಲಿದ್ದಾರೆ.
ಗೌತಮ್ ಅದಾನಿ ಮತ್ತು ಕುಟುಂಬ ಏಳನೇ ಸ್ಥಾನದಲ್ಲಿದ್ದು, 190 ಕೋಟಿ ರೂಪಾಯಿಗಳನ್ನು ದೇಣಿಗೆಯಾಗಿ ನೀಡಿದೆ. 8ನೇ ಸ್ಥಾನದಲ್ಲಿ ಅನಿಲ್ ಅಗರ್ವಾಲ್, 9ನೇ ಸ್ಥಾನದಲ್ಲಿ ನಂದನ್ ನಿಲೇಕಣಿ ಹಾಗೂ 10ನೇ ಸ್ಥಾನದಲ್ಲಿ ಎಎಂ ನಾಯಕ್ ಇದ್ದಾರೆ.