ಬೆಂಗಳೂರು : ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ರಾಯಭಾರಿಯಾಗಿ ನಟ ಡಾಲಿ ಧನಂಜಯ್ ನೇಮಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ಸ್ಯಾಂಡಲ್ ವುಡ್ ನಲ್ಲಿ ಡಾಲಿಯಾಗಿ ಮಿಂಚಿದ ನಟ ಧನಂಜಯ್ ಗೆ ಸರ್ಕಾರ ಮಹತ್ವದ ಜವಾಬ್ದಾರಿ ನೀಡಿದೆ.
ಇಂದಿನಿಂದ ಒಂದು ವಾರ 15ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಆರಂಭವಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನಸೌಧ ಮುಂಭಾಗದಲ್ಲಿ ನಡೆಯುವ ಅದ್ದೂರಿ ಕಾರ್ಯಕ್ರಮದಲ್ಲಿ ಚಲನಚಿತ್ರೋತ್ಸವ ಉದ್ಘಾಟಿಸಲಿದ್ದಾರೆ.
ಖ್ಯಾತ ನಟ ಜಬ್ಬಾರ್ ಪಟೇಲ್, ಬಾಂಗ್ಲಾ ನಟಿ ಅಜಮೇರಿ ಬಂದೋನ್, ಜೆಕ್ ವಿಮರ್ಶಕಿ ವಿಯಾರಾ ಲ್ಯಾಂಗರೋವಾ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಉದ್ಘಾಟನಾ ಚಲನಚಿತ್ರವಾಗಿ ಪೀಟರ್ ಲೂಸಿ ನಿರ್ದೇಶನದ ಸ್ವಿಸ್ ಚಿತ್ರ ‘ಬೋಂಗೋರ್ ಸ್ವಿಜರ್ ಲೆಂಡ್’ ಪ್ರದರ್ಶಿಸಲಾಗುವುದು. ಮೂರು ಬಾರಿ ಗ್ರ್ಯಾಮ್ಮಿ ಪ್ರಶಸ್ತಿ ಪಡೆದ ರಿಕ್ಕಿ ಕೇಜ್ ಅವರಿಂದ ಸಂಗೀತ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಅಲ್ಲದೇ, ಡಾ.ಬಾಬು ಜಗಜೀವನ ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮಕ್ಕೆ ಇದೇ ಮೊದಲ ಬಾರಿಗೆ ರಾಯಭಾರಿಯನ್ನ ಆಯ್ಕೆ ಮಾಡಿದೆ. ಡಾಲಿ ಧನಂಜಯ್ ಲಿಡ್ಕರ್ ಗೆ ರಾಯಭಾರಿ ಆಗಿದ್ದಾರೆ. ಸಾಲು ಸಾಲು ಸಿನಿಮಾದಲ್ಲಿ ಬ್ಯುಸಿಯಾಗಿರುವ ನಟ ಡಾಲಿ ಧನಂಜಯ್ ಮೊದಲ ಬಾರಿಗೆ ಸರ್ಕಾರದ ಜಾಹೀರಾತಿನಲ್ಲಿ ಮಿಂಚುವ ಮೂಲಕ ಲಿಡ್ಕರ್ ಬ್ರಾಂಡ್ ಪ್ರಮೋಟ್ ಮಾಡುತ್ತಿದ್ದಾರೆ.ಸದ್ಯದಲ್ಲೇ ಜಾಹೀರಾತಿನ ಚಿತ್ರೀಕರಣ ಕೂಡ ನಡೆಯಲಿದೆ ಎನ್ನಲಾಗಿದೆ.