![](https://kannadadunia.com/wp-content/uploads/2018/08/181980_1100--1024x585.jpg)
ನಾಯಿ ನಂಬುಗೆಯ ಮಾನವನ ಮಿತ್ರ. ಒಂದು ಅಂದಾಜಿನಂತೆ ನಮ್ಮ ದೇಶದಲ್ಲಿ ಸುಮಾರು 2.5 ಕೋಟಿ ನಾಯಿಗಳಿವೆ. ಇವುಗಳಲ್ಲಿ ಬಹುಪಾಲು ಬೀದಿನಾಯಿಗಳು. ರೇಬಿಸ್ ರೋಗದ ವಿರುದ್ದ ಲಸಿಕೆಯನ್ನು ಪಡೆಯದ ನಾಯಿಗಳು.
ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಕಾರ್ಮಿಕರಿಗೆ, ಅಂಚೆಯವರಿಗೆ, ಪತ್ರಿಕೆ ಹಾಕುವ ಹುಡುಗರಿಗೆ, ಹಾಲು ತಂದು ಕೊಡುವವರಿಗೆ ನಾಯಿ ಕಚ್ಚುವುದು ಅಪರೂಪವಲ್ಲ. ಭಾರತದಲ್ಲಿ ಪ್ರತಿವರ್ಷ ಸುಮಾರು 30,000 ಜನರು ರೇಬಿಸ್ ರೋಗದಿಂದ ಸತ್ತರೆ 11-15 ಲಕ್ಷ ಜನರು ರೇಬಿಸ್ ನಿರೋಧಕ ಲಸಿಕೆಯನ್ನು ತೆಗೆದುಕೊಳ್ಳುತ್ತಾರೆ.
ರೇಬಿಸ್ ರೋಗವು ಹುಚ್ಚು ನಾಯಿ ಕಡಿತದಿಂದ ಮಾತ್ರ ಬರುತ್ತದೆ ಎಂದು ಜನ ಸಾಮಾನ್ಯರು ತಿಳಿದಿರುವುದುಂಟು. ವಾಸ್ತವದಲ್ಲಿ ಶೇ.99 ಪ್ರಕರಣಗಳಲ್ಲಿ ಇದು ನಿಜ. ಉಳಿದ ಶೇ.1 ಪ್ರಕರಣದಲ್ಲಿ ಇಲಿಯಂತಹ ಸಣ್ಣ ಪ್ರಾಣಿಯಿಂದ ಹಿಡಿದು ಆನೆಯಂತಹ ಬೃಹತ್ ಪ್ರಾಣಿಯ ಕಡಿತದಿಂದ ರೇಬಿಸ್ ಬರಬಹುದು. ರೇಬಿಸ್ ಬರಬೇಕಾದರೆ ಆ ಪ್ರಾಣಿ ರೇಬಿಸ್ ಕಾಯಿಲೆಯಿಂದ ನರಳುತ್ತಿರಬೇಕು. ಇಲ್ಲದಿದ್ದರೆ, ಕೇವಲ ಪ್ರಾಣಿ ಕಡಿತದಿಂದ ರೇಬಿಸ್ ರೋಗ ಬರುವುದಿಲ್ಲ.
ರೇಬಿಸ್ ರೋಗ ತಡೆಗಟ್ಟಲು ಲಸಿಕೆ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಪ್ರಥಮ ಚಿಕಿತ್ಸೆ. ಹಾಗಾಗಿ ಈ ಬಗ್ಗೆ ಪ್ರತಿಯೊಬ್ಬರಿಗೂ ಮಾಹಿತಿಯಿರಬೇಕು. ಮುಖ್ಯವಾಗಿ ಮಕ್ಕಳಿಗೆ ಕಲಿಸಬೇಕು. ಸರಿಯಾದ ವಿಧಾನದಲ್ಲಿ ನೀಡಿದ ಪ್ರಥಮ ಚಿಕಿತ್ಸೆಯಿಂದ ರೇಬಿಸ್ ಬರುವ ಸಾಧ್ಯತೆಯನ್ನು ಶೇ.80 ರಷ್ಟು ಕಡಿಮೆ ಮಾಡಬಹುದು. ಅದು ಹೀಗಿದೆ.
* ಪ್ರಥಮ ಚಿಕಿತ್ಸೆಯನ್ನು ಪ್ರಾಣಿ ಕಚ್ಚಿದ ಕೆಲವೇ ನಿಮಿಷಗಳಲ್ಲಿ ಆರಂಭಿಸಬೇಕು.
* ಅನಿವಾರ್ಯ ಸಂದರ್ಭದಲ್ಲಿ ತಡವಾಗಬಹುದು. ಹಾಗೆಂದು ಪ್ರಥಮ ಚಿಕಿತ್ಸೆ ನೀಡುವುದನ್ನು ತಡ ಮಾಡಬಾರದು. ಇದನ್ನು ನೀಡಿಯೇ ತೀರಬೇಕು.
* ಪ್ರಾಣಿ ಕಚ್ಚಿದ ಸ್ಥಳವನ್ನು ನಲ್ಲಿ ನೀರಿನ ಧಾರೆಯ ಕೆಳಗಿಡಬೇಕು. ವೇಗವಾಗಿ ನೀರನ್ನು ಬಿಡಬೇಕು. ನೀರಿನಧಾರೆ ನೇರವಾಗಿ ಗಾಯದ ಮೇಲೆ ಬೀಳುವಂತಿರಬೇಕು. ಯಾವುದೇ ಸೋಪು ಸಿಕ್ಕರೂ ಸರಿ, ಅದನ್ನು ಗಾಯದ ಮೇಲೆ ಉಜ್ಜಿ ತೊಳೆಯುತ್ತಾ ಇರಬೇಕು.
* ಹೀಗೆ ಕನಿಷ್ಟ 5 ನಿಮಿಷ ತೊಳೆಯಬೇಕು. ಒಂದು ವೇಳೆ ಸ್ವಲ್ಪ ಸಮಯ ಹೆಚ್ಚಾದರೆ ಚಿಂತೆಯಿಲ್ಲ. ಕಡಿಮೆಯಾಗಬಾರದು. ಇದರಿಂದ ನರ ತಂತುಗಳಿಗೆ ಅಂಟಿಕೊಂಡು ಒಳಪ್ರವೇಶಿಸಲು ಪ್ರಯತ್ನಿಸುತ್ತಿರುವ ವೈರಸ್ ಗಳನ್ನು ನಿವಾರಿಸಬಹುದು. ರೇಬಿಸ್ ವೈರಸ್ಸಿನ ಹೊರ ಮೈ ಕೊಬ್ಬಿನಿಂದಾಗಿರುತ್ತದೆ. ಸೋಪು ಈ ಕೊಬ್ಬನ್ನು ನಾಶಮಾಡಬಲ್ಲದು. ಕೊಬ್ಬಿನ ಪದರ ನಾಶವಾದರೆ ವೈರಸ್ ಸಾಯುತ್ತದೆ.
* ಎಲ್ಲ ಸಂದರ್ಭದಲ್ಲಿ ನಲ್ಲಿಯಲ್ಲಿ ನೀರು ಬರದಿರಬಹುದು. ನಲ್ಲಿಯಿರುವ ಪಾತ್ರೆ ದೊರೆಯದಿರಬಹುದು. ಅಂತಹ ಸಂದರ್ಭದಲ್ಲಿ ನೀರನ್ನು ಚಿಮ್ಮಬಲ್ಲ ಯಾವುದೆ ಸಾಧನವನ್ನು ಬಳಸಬೇಕಾಗುತ್ತದೆ. ಸಿರಿಂಜು, ಪಿಚಕಾರಿ, ನೀರಿನ ಪೈಪು ಇತ್ಯಾದಿ. ನೀರನ್ನು ವೇಗವಾಗಿ ಒತ್ತಡದಲ್ಲಿ ಚಿಮ್ಮುವುದು ಬಹಳ ಮುಖ್ಯ ಎಂಬುದನ್ನು ಮರೆಯದಿರಿ.
* ಗಾಯಕ್ಕೆ ಸರ್ಜಿಕಲ್ ಸ್ಪಿರಿಟ್, ಟಿಂಕ್ಚರ್ ಅಯೋಡಿನ್, ಪೊವಿಡೋನ್ ಅಯೋಡಿನ್ ಮುಂತಾದವನ್ನು ಹಚ್ಚಬೇಕಾಗುತ್ತದೆ. ಈ ಔಷಧಗಳು ರೇಬಿಸ್ ವೈರಸ್ಸನ್ನು ಸಾಯಿಸಬಲ್ಲವು. ಇವು ಸಿಗದಿದ್ದಲ್ಲಿ ಬ್ರಾಂಡಿ, ವಿಸ್ಕಿ, ರಮ್ ಗಳಿಂದಲೂ ಗಾಯವನ್ನು ತೊಳೆಯಬಹುದು. ಜಾಹೀರಾತುಗಳಲ್ಲಿ ಬರುವ ಕ್ರಿಮಿನಾಶಕಗಳು ಉಪಯೋಗವಿಲ್ಲ.
* ಗಾಯಕ್ಕೆ ಹೊಲಿಗೆ ಹಾಕಿಸಬೇಡಿ. ಪಟ್ಟಿ ಕಟ್ಟಿಸಬೇಡಿ. ಧೂಳು ಬೀಳದಂತೆ ಬಟ್ಟೆ ಮುಚ್ಚಿ. ಕೂಡಲೇ ವೈದ್ಯರ ಹತ್ತಿರ ಕರೆದೊಯ್ಯಿರಿ. ಗಾಯವನ್ನು ಪರೀಕ್ಷಿಸಿದ ವೈದ್ಯರು, ಪ್ರಾಣಿ ಕಡಿತದ ಬಗ್ಗೆ ಅಗತ್ಯ ಮಾಹಿತಿಯನ್ನು ನಿಮ್ಮಿಂದ ಸಂಗ್ರಹಿಸಿ, ಗಾಯವನ್ನು ಪರೀಕ್ಷಿಸಿ, ಹೊಲಿಗೆ ಹಾಕಬೇಕೇ ಬೇಡವೇ, ಪಟ್ಟಿ ಕಟ್ಟಬೇಕೇ ಬೇಡವೇ, ಲಸಿಕೆಯ ಜೊತೆಗೆ “ಆಂಟಿ ರೇಬಿಕ್ ಸೀರಂ” ಕೊಡಬೇಕೆ ಇತ್ಯಾದಿಗಳನ್ನು ನಿರ್ಣಯಿಸುತ್ತಾರೆ.
ಜನರು ಗಾಯ ತೊಳೆಯುವುದರ ಬಗ್ಗೆ ಅಷ್ಟಾಗಿ ಗಮನ ಕೊಡುವುದಿಲ್ಲ. ಗಾಯದ ಮೇಲೆ ನೀರು ಸುರುವಿದ ಶಾಸ್ತ್ರ ಮಾಡುತ್ತಾರೆ ಅಷ್ಟೆ. ನೀರು ಹಾಕಿದರೂ ಸೋಪನ್ನು ಹಾಕುವುದಿಲ್ಲ. ನೀರು ಸೋಪು ಹಾಕಿದರೂ ಕನಿಷ್ಟ 5 ನಿಮಿಷ ಕಾಲ ತೊಳೆಯುವುದಿಲ್ಲ. ಕಾರಣ ಸೋಪು-ನೀರು ತೊಳೆಯುವಿಕೆಯ ಮಹತ್ವದ ಬಗ್ಗೆ ಅವರಿಗೆ ಅರಿವಿರುವುದಿಲ್ಲ.
ಗಾಯವನ್ನು ಸರಿಯಾಗಿ ತೊಳೆದು, ವೈದ್ಯರ ಸಲಹೆಯಂತೆ ಲಸಿಕೆ / ಆಂಟಿ ರೇಬಿಕ್ ಸೀರಮ್ ತೆಗೆದುಕೊಂಡರೆ ರೇಬಿಸ್ಸಿನಿಂದ ಪಾರಾಗುವುದು ಕಷ್ಟವಲ್ಲ.