ಶಿವಮೊಗ್ಗ: ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಕೆಂಚನಹಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬ ಬೀದಿ ನಾಯಿಯನ್ನು ಕ್ರೂರವಾಗಿ ಹೊಡೆದುಕೊಂಡು ಆಟೋದಲ್ಲಿ ಎಳೆದುಕೊಂಡು ಹೋದ ಘಟನೆ ನಡೆದಿದೆ. ಈ ಬಗ್ಗೆ ಗಮನಕ್ಕೆ ಬಂದ ಹಿನ್ನೆಲೆಯಲ್ಲಿ ಪ್ರಾಣಿ ದಯಾ ಸಂಘದ ರಾಷ್ಟ್ರೀಯ ಕಾರ್ಯಕರ್ತೆ ಹಾಗೂ ಕೇಂದ್ರದ ಮಾಜಿ ಸಚಿವೆ ಮೇನಕಾ ಗಾಂಧಿ ಅವರು ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದ್ದಾರೆ.
ಕೆಂಚನಾಲ ರೈಲ್ವೆ ನಿಲ್ದಾಣದ ಸಮೀಪ ಬೀದಿ ನಾಯಿಯನ್ನು ಅಮಾನುಷವಾಗಿ ಹೊಡೆದು ಸಾಯಿಸಿ ಆಟೋದಲ್ಲಿ ಎಳೆದುಕೊಂಡ ಆರೋಪದಡಿ ಆಟೋ ಚಾಲಕ ವಾಜಿದ್ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗಿದೆ.
ರೈಲು ನಿಲ್ದಾಣದ ಸಮೀಪ ಮಲಗಿದ್ದ ನಾಯಿಯ ಮೇಲೆ ವಾಜಿದ್ ದೊಡ್ಡ ಕಲ್ಲು ಎತ್ತಿಹಾಕಿ ಸಾಯಿಸಿದ್ದಾನೆ. ನಾಯಿ ತೀವ್ರ ನೋವಿನಿಂದ ನರಳುತ್ತಿದ್ದಾಗ ಪದೇಪದೇ ಕಲ್ಲು ಎತ್ತಿ ಹಾಕಿ ಸಾಯಿಸಿದ ಆರೋಪಿ ಆಟೋ ಹಿಂಬದಿಗೆ ಕಟ್ಟಿ ಎಳೆದುಕೊಂಡು ಹೋಗಿದ್ದಾನೆ. ಸ್ಥಳೀಯರೊಬ್ಬರು ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಂಡು ಪತ್ರಕರ್ತರೊಬ್ಬರ ಗಮನಕ್ಕೆ ತಂದಿದ್ದು, ಅವರು ಯುವಕನ ಇ-ಮೇಲ್ ನಿಂದ ಮೇನಕಾ ಗಾಂಧಿ ಇಮೇಲ್ ಐಡಿಗೆ ಸಂದೇಶ ಕಳುಹಿಸಿದ್ದಾರೆ.
ಕೇವಲ 45 ನಿಮಿಷದಲ್ಲಿ ಸ್ಪಂದಿಸಿ ಸ್ಥಳೀಯ ಠಾಣೆಗೆ ದೂರು ನೀಡುವಂತೆ ಮತ್ತು ಶಿವಮೊಗ್ಗ ಎಸ್ಪಿಗೆ ಮಾಹಿತಿ ನೀಡಿರುವುದಾಗಿ ಮೇನಕಾ ಗಾಂಧಿ ದೂರು ನೀಡಿದ ಯುವಕನಿಗೆ ಹೇಳಿದ್ದಾರೆ. ಅಲ್ಲದೆ, ತಮಗೆ ಕರೆ ಮಾಡಿ ಮುಂದಿನ ಬೆಳವಣಿಗೆ ಬಗ್ಗೆ ತಿಳಿಸುವಂತೆ ಮೊಬೈಲ್ ನಂಬರ್ ಕಳುಹಿಸಿದ್ದಾರೆ.
ಈ ಬಗ್ಗೆ ದೂರು ದಾಖಲಾಗಿದ್ದು, ಆರೋಪಿ ಚಾಲಕ ವಾಜಿದ್ ನನ್ನು ಬಂಧಿಸಲಾಗಿದೆ. ಮನೆಯಲ್ಲಿ ಸಾಕಿದ್ದ ಕೋಳಿಗಳನ್ನು ನಾಯಿ ತಿನ್ನುತ್ತಿದ್ದ ಕಾರಣ ಕೋಪದಿಂದ ಹೀಗೆ ಮಾಡಿರುವುದಾಗಿ ಆತನ ಕುಟುಂಬದವರು ಹೇಳಿದ್ದಾರೆ.