ರಾಯಚೂರು: ಕುಡಿಯುವ ನೀರು ಸರಬರಾಜು ಮಾಡುವ ಟ್ಯಾಂಕ್ ನಲ್ಲಿ ನಾಯಿಯ ಕಳೆಬರ ಪತ್ತೆಯಾಗಿದ್ದು, ಇದೇ ನೀರನ್ನು ಸೇವಿಸಿದ ಜನರಲ್ಲಿ ಆತಂಕ ಉಂಟಾಗಿದೆ.
ರಾಯಚೂರು ತಾಲೂಕಿನ ಬಿಚ್ಚಾಲಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ 17 ಗ್ರಾಮಗಳ ಜನರಲ್ಲಿ ಆತಂಕ ಮನೆ ಮಾಡಿದೆ. ಕಳೆದ ಮೂರು ದಿನಗಳಿಂದಲೂ ನಾಯಿ ಸತ್ತು ಬಿದ್ದಿರುವ ಟ್ಯಾಂಕ್ ನಿಂದ ಪೂರೈಕೆಯಾದ ನೀರನ್ನು ಸೇವಿಸಿದ ಗ್ರಾಮಗಳ ಅನೇಕ ಜನರಲ್ಲಿ ವಾಂತಿ ಭೇದಿ ಕಾಣಿಸಿಕೊಂಡಿದೆ. ಕೆಲವರು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದಿದ್ದಾರೆ. ಗ್ರಾಮ ಪಂಚಾಯಿತಿ ಸಿಬ್ಬಂದಿಯ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ ಎಂದು ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.