ಬಳ್ಳಾರಿ: ಹುಚ್ಚುನಾಯಿ ದಾಳಿಯಿಂದ ಗಾಯಗೊಂಡಿದ್ದ ಬಾಲಕಿ, ಬಾಲಕ ಸಾವನ್ನಪ್ಪಿದ್ದಾರೆ. ಬಳ್ಳಾರಿ ಜಿಲ್ಲೆಯ ಕುರುಗೋಡು ತಾಲೂಕಿನ ಬಾದನಹಟ್ಟಿಯಲ್ಲಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ನವೆಂಬರ್ 21 ರಂದು ಮೂರು ವರ್ಷದ ಬಾಲಕಿ ಸುರಕ್ಷಿತಾ ಸಾವನ್ನಪ್ಪಿದ್ದಾಳೆ. ನವೆಂಬರ್ 22 ರಂದು 7 ವರ್ಷದ ಬಾಲಕ ಶಾಂತಕುಮಾರ್ ಮೃತಪಟ್ಟಿದ್ದಾನೆ. ಹುಚ್ಚು ನಾಯಿ ದಾಳಿಗೆ ಬಾಲಕಿ ಮತ್ತು ಬಾಲಕ ಬಲಿಯಾದ ಈ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಹುಚ್ಚು ನಾಯಿ ದಾಳಿಯಿಂದ ಬಾಲಕಿಯ ಮುಖದಲ್ಲಿ ಗಂಭೀರ ಗಾಯವಾಗಿತ್ತು. ಬಾಲಕ ಶಾಂತಕುಮಾರ್ ಕೈಗೆ ಹುಚ್ಚು ನಾಯಿ ಕಚ್ಚಿತ್ತು. ಚುಚ್ಚುಮದ್ದು ಹಾಕಿದ್ದರೂ ಬಾಲಕಿ ಸುರಕ್ಷಿತಾ ಸಾವನ್ನಪ್ಪಿದ್ದಾಳೆ. ಸಕಾಲಕ್ಕೆ ಚಿಕಿತ್ಸೆ ಪಡೆದುಕೊಳ್ಳದೆ ಬಾಲಕ ಶಾಂತಕುಮಾರ್ ಮೃತಪಟ್ಟಿದ್ದಾನೆ.
ನಿನ್ನೆಯಷ್ಟೇ ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನಲ್ಲಿ ಬೀದಿ ನಾಯಿಗಳ ದಾಳಿಯಿಂದ ಮೂರೂವರೆ ವರ್ಷದ ಬಾಲಕ ಸಾವನ್ನಪ್ಪಿದ್ದ ಘಟನೆ ನಡೆದಿತ್ತು.