ಆಸ್ಪತ್ರೆಯಲ್ಲಿ ಮಗುವಿನ ಮೇಲೆ ಬೀದಿ ನಾಯಿ ದಾಳಿ ಮಾಡಿದ ಘಟನೆ ಮೂಡಬಿದರೆಯ ಸಮುದಾಯ ಆರೋಗ್ಯ ಕೇಂದ್ರದ ಪ್ರವೇಶ ದ್ವಾರದ ಬಳಿ ನಡೆದಿದೆ.
ಶುಕ್ರವಾರ ಕೋಟೆಬಾಗಿಲಿನ ಎರಡೂವರೆ ವರ್ಷದ ಹೆಣ್ಣು ಮಗು ಇಂಜೆಕ್ಷನ್ ಪಡೆದುಕೊಳ್ಳಲು ಕುರ್ಚಿಯಲ್ಲಿ ಕುಳಿತಿದ್ದ ಸಂದರ್ಭದಲ್ಲಿ ಬೀದಿ ನಾಯಿ ದಾಳಿ ನಡೆಸಿ ಮಗುವಿನ ಕೆನ್ನೆ, ಮುಖದ ಮೇಲೆ ಕಚ್ಚಿ ಗಾಯಗೊಳಿಸಿದೆ.
ಮಗುವನ್ನು ಕುರ್ಚಿಯಲ್ಲಿ ಕುಳ್ಳಿರಿಸಿ ಮಗುವಿನ ಪಕ್ಕದಲ್ಲಿ ತಂದೆ ಹಾಗೂ ತಾಯಿ ನಿಂತಿದ್ದರೂ ಆಸ್ಪತ್ರೆ ಬಳಿ ಓಡಾಡುತ್ತಿದ್ದ ಬೀದಿ ನಾಯಿ ಏಕಾಏಕಿ ಮಗುವಿನ ಮೇಲೆ ದಾಳಿ ನಡೆಸಿದೆ. ಇದೇ ನಾಯಿ ಇದಕ್ಕಿಂತ ಮೊದಲು ಪೇಟೆಯಲ್ಲಿ ಇಬ್ಬರಿಗೆ ಕಚ್ಚಿದೆ ಎನ್ನಲಾಗಿದೆ. ಚಿಕಿತ್ಸೆ ಬಳಿಕ ನಾಯಿ ದಾಳಿಗೊಳಗಾದ ಮಗು ಚೇತರಿಸಿಕೊಂಡಿದೆ ಎಂದು ಹೇಳಲಾಗಿದೆ.