ದೇಹವು ಹೆಚ್ಹೆಚ್ಚು ಬೆವರಿದಾಗ ತೂಕ ಕೂಡ ಬಹುಬೇಗನೆ ಕಡಿಮೆಯಾಗುತ್ತದೆ ಎಂಬ ಭಾವನೆ ಅನೇಕರಲ್ಲಿದೆ. ವೃತ್ತಿಪರ ಜಿಮ್ ತರಬೇತುದಾರು ಕೂಡ ಇದನ್ನೇ ಹೇಳುತ್ತಾರೆ. ಆದರೆ ಬೇಸಿಗೆಯಲ್ಲಿ ವ್ಯಾಯಾಮ ಮಾಡದಿದ್ದರೂ ಸಹ ನಮ್ಮ ದೇಹವು ತುಂಬಾ ಬೆವರುತ್ತದೆ. ಹಾಗಿದ್ದಲ್ಲಿ ಬೆವರುವಿಕೆಯಿಂದ ತೂಕ ನಷ್ಟವಾಗುತ್ತದೆ ಎಂಬುದು ಎಷ್ಟು ಸತ್ಯ ಎಂಬ ಪ್ರಶ್ನೆ ಸಹಜ. ಈ ಎಲ್ಲಾ ಕುತೂಹಲಗಳಿಗೆ ವೈದ್ಯರೇ ತೆರೆ ಎಳೆದಿದ್ದಾರೆ.
ತಜ್ಞ ವೈದ್ಯರ ಪ್ರಕಾರ ಬೆವರುವ ಮೂಲಕ ತೂಕವನ್ನು ಕಳೆದುಕೊಳ್ಳಬಹುದು ಎಂಬ ಕಲ್ಪನೆ ಸಂಪೂರ್ಣವಾಗಿ ತಪ್ಪು, ಇದನ್ನು ಯಾರೂ ನಂಬಬಾರದು. ಈ ವಿಷಯವನ್ನು ತಮ್ಮ ಮನಸ್ಸಿನಿಂದ ತೆಗೆದುಹಾಕಬೇಕು.
ಬೆವರುವುದು ದೇಹದ ಒಂದು ಕ್ರಿಯೆ. ಇದರಿಂದ ದೇಹದಿಂದ ಕೊಳೆಯು ಹೊರಹಾಕಲ್ಪಡುತ್ತದೆ ಮತ್ತು ತಾಪಮಾನವನ್ನು ನಿಯಂತ್ರಿಸಬಹುದು. ಹೆಚ್ಚಿನ ತೀವ್ರತೆಯ ವ್ಯಾಯಾಮವನ್ನು ಮಾಡಿದಾಗ, ದೇಹವು ಬಿಸಿಯಾಗುತ್ತದೆ. ಆಗ ಬೆವರುವಿಕೆಯ ಮೂಲಕ ದೇಹವನ್ನು ತಂಪಾಗಿಸುವ ಪ್ರಕ್ರಿಯೆ ನಡೆಯುತ್ತದೆ. ಬೆವರುವಿಕೆಯಲ್ಲಿ ಸುಡುವ ಕ್ಯಾಲೊರಿಗಳು ಅಷ್ಟು ಪರಿಣಾಮಕಾರಿಯಾಗಿಲ್ಲ. ಇದು ಬೆವರು ಗ್ರಂಥಿಗಳ ಕಾರ್ಯದಲ್ಲಿ ಮಾತ್ರ ಸಹಾಯ ಮಾಡುತ್ತದೆ.
ಇದರ ಬದಲು ತೂಕ ಇಳಿಸಿಕೊಳ್ಳಲು ಸಂಪೂರ್ಣ ಆಹಾರ, ತರಕಾರಿ ಮತ್ತು ಆರೋಗ್ಯಕರ ಕೊಬ್ಬುಗಳಲ್ಲಿ ಸಮೃದ್ಧವಾಗಿರುವ ಸಮತೋಲಿತ ಆಹಾರವನ್ನೇ ಸೇವಿಸಬೇಕು. ಮಾನಸಿಕ ಆರೋಗ್ಯ ಮತ್ತು ಒತ್ತಡದ ಮಟ್ಟವನ್ನು ಕಾಯ್ದುಕೊಳ್ಳಬೇಕು. ನಿಯಮಿತವಾಗಿ ವ್ಯಾಯಾಮ ಮಾಡಬೇಕು. ಪ್ರತಿ ರಾತ್ರಿ 7-9 ಗಂಟೆಗಳ ಕಾಲ ಉತ್ತಮ ನಿದ್ರೆ ಪಡೆಯಲೇಬೇಕು. ನಿದ್ರೆಯ ಕೊರತೆ ನಮ್ಮ ಚಯಾಪಚಯವನ್ನು ತೊಂದರೆಗೊಳಿಸುತ್ತದೆ ಮತ್ತು ಅನಾರೋಗ್ಯಕರ ಆಹಾರಕ್ಕಾಗಿ ಕಡುಬಯಕೆಗಳನ್ನು ಹೆಚ್ಚಿಸುತ್ತದೆ.
ತೂಕ ನಷ್ಟಕ್ಕೆ ಯಾವುದೇ ಶಾರ್ಟ್‌ಕಟ್ ಇಲ್ಲ ಎಂಬುದನ್ನು ನೆನಪಿನಲ್ಲಿಡಿ. ಒಳ್ಳೆಯದನ್ನು ಸಾಧಿಸಲು ಸಮಯ ಬೇಕು. ಹೊಟ್ಟೆ ಮತ್ತು ಸೊಂಟದ ಕೊಬ್ಬನ್ನು ಕಡಿಮೆ ಮಾಡಲು ದೀರ್ಘಾವಧಿಯ ಪರಿಹಾರಗಳತ್ತ ಗಮನಹರಿಸುವುದು ಉತ್ತಮ.