ಚಿಕ್ಕಬಳ್ಳಾಪುರ: ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯ ರಾಜ್ಯ ಮಟ್ಟದ ಕಾರ್ಯಕ್ರಮಕ್ಕೆ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಗುಂಗೀರ್ಲಹಳ್ಳಿಗೆ ಇಂದು ಮುಖ್ಯಮಂತ್ರಿಗಳು ಆಗಮಿಸಲಿದ್ದು, ಅವರಿಗೆ ಪೂರ್ಣಕುಂಭ ಸ್ವಾಗತ ನೀಡಿ ಎತ್ತಿನಗಾಡಿಯಲ್ಲಿ ಕರೆತರಲು ಯೋಜಿಸಲಾಗಿದೆ. ಕಾರ್ಯಕ್ರಮಕ್ಕೆ ಹಾಗೂ ಯೋಜನೆಯ ಅನುಷ್ಠಾನಕ್ಕೆ ಸಕಲ ಸಿದ್ಧತೆಗಳನ್ನು ಜಿಲ್ಲೆಯಲ್ಲಿ ಈಗಾಗಲೇ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಆರ್.ಲತಾ ಅವರು ತಿಳಿಸಿದರು.
ಮುಖ್ಯಮಂತ್ರಿಗಳು ಮೊದಲಿಗೆ ಗುಂಗೀರ್ಲಹಳ್ಳಿಯಲ್ಲಿರುವ ದೇವಸ್ಥಾನಕ್ಕೆ ಭೇಟಿ ನೀಡಿ ದೇವಸ್ಥಾನದ ಆವರಣದಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ನೆರವೇರಿಸಲಿದ್ದಾರೆ. ನಂತರ ಮನೆ ಮನೆಗೆ ಭೇಟಿ ನೀಡಿ ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆಯಡಿಯ ದಾಖಲೆಗಳಾದ ಪಹಣಿ, ಅಟ್ಲಾಸ್/ಹಿಸ್ಸಾ ಸ್ಕೆಚ್, ಆದಾಯ ಮತ್ತು ಜಾತಿ ಪ್ರಮಾಣ ಪತ್ರಗಳನ್ನು ಹಾಗೂ ಇನ್ನಿತರ ದಾಖಲೆಗಳನ್ನು ಒಳಗೊಂಡ ಲಕೋಟೆಯನ್ನು ಖುದ್ದಾಗಿ ರೈತರಿಗೆ ಹಾಗೂ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸುವ ಮೂಲಕ ಈ ಯೋಜನೆಗೆ ಚಾಲನೆ ನೀಡಲಿದ್ದಾರೆ. ನಂತರ ಆ ಗ್ರಾಮದಲ್ಲಿರುವ ಹಳ್ಳಿಕಟ್ಟೆಯಲ್ಲಿ ಗ್ರಾಮಸ್ಥರೊಂದಿಗೆ ಹಾಗೂ ರೈತರೊಂದಿಗೆ ಸಂವಾದ ನಡೆಸಲಿದ್ದಾರೆ. ಕೊನೆಯದಾಗಿ ವೇದಿಕೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಈ ಯೋಜನೆಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಸರ್ಕಾರದ ವಿವಿಧ ಯೋಜನೆಯಡಿಯ ಫಲಾನುಭವಿಗಳಿಗೆ ಸವಲತ್ತುಗಳನ್ನು ವಿತರಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕಂದಾಯ ಸಚಿದ ಆರ್.ಅಶೋಕ್, ಜಿಲ್ಲಾ ಉಸ್ತುವಾರಿ ಸಚಿವ ಎನ್. ನಾಗರಾಜು, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಹಾಗೂ ರಾಜ್ಯ ಮಟ್ಟದ ಹಿರಿಯ ಅಧಿಕಾರಿಗಳು, ಸ್ಥಳೀಯ ಜನಪ್ರತಿನಿಧಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮುಖ್ಯ ಉದ್ದೇಶ
ಕಂದಾಯ ದಾಖಲೆ ಮನೆಬಾಗಿಲಿಗೆ ಯೋಜನೆ”ಯಡಿ ರೈತರ ಹಕ್ಕನ್ನು / ಅರ್ಹತೆಯನ್ನು ನಿರ್ಧರಿಸುವ ಮೂಲ ಕಂದಾಯ ದಾಖಲೆಗಳಾದ ಪಹಣಿ ಮತ್ತು ಅಟ್ಲಾಸ್ಗಳು ಭೂಮಿ ಮತ್ತು ಮೋಜಣಿ ತಂತ್ರಾಂಶಗಳಲ್ಲಿ ಲಭ್ಯವಿದ್ದು ಹಾಗೂ ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳು ಇ-ಕ್ಷಣ ತಂತ್ರಾಂಶದಲ್ಲಿ ಲಭ್ಯವಿದ್ದು, ಸದರಿ ತಂತ್ರಾಂಶಗಳಿಂದ ಪಹಣಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರಗಳನ್ನು ಕುಟುಂಬವಾರು ಪಡೆದು ಸದರಿ ದಾಖಲೆಗಳನ್ನು ಲಕೋಟೆಯಲ್ಲಿರಿಸಿ ಕಂದಾಯ ಇಲಾಖೆ ವತಿಯಿಂದ ರಾಜ್ಯದ ಪ್ರತೀ ರೈತ ಕುಟುಂಬದ ಮನೆ ಬಾಗಿಲಿಗೆ ಹಾಗೂ ಫಲಾನುಭವಿಗಳಿಗೆ ಉಚಿತವಾಗಿ ತಲುಪಿಸುವುದು ಈ ಯೋಜನೆಯ ಮುಖ್ಯ ಉದ್ದೇಶವಾಗಿದೆ.