ಬೆಂಗಳೂರು: ರಾಜ್ಯ ಸರ್ಕಾರ ಮನೆ ಬಾಗಿಲಿಗೆ ಉಚಿತವಾಗಿ ದಾಖಲೆ ತಲುಪಿಸುವ ಯೋಜನೆಗೆ ಜನವರಿ 26ರಂದು ಚಾಲನೆ ನೀಡಲಾಗುವುದು.
62.85 ಲಕ್ಷ ರೈತರ ಜಮೀನಿನ ಪಹಣಿ, ನಕ್ಷೆ ದಾಖಲೆ ಆದಾಯ ಮತ್ತು ಜಾತಿ ಪ್ರಮಾಣ ಪತ್ರವನ್ನು ಅವರವರ ಮನೆ ಬಾಗಿಲಿಗೆ ಉಚಿತವಾಗಿ ತಲುಪಿಸಲಾಗುತ್ತದೆ. ಮನೆಬಾಗಿಲಿಗೆ ಕಂದಾಯ ದಾಖಲೆ ತಲುಪಿಸುವ ಯೋಜನೆಗೆ ಜನವರಿ 26 ರಂದು ರಾಜ್ಯಮಟ್ಟದಲ್ಲಿ ಗಣರಾಜ್ಯೋತ್ಸವದ ದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಚಾಲನೆ ನೀಡಲಿದ್ದಾರೆ. ಇದೇ ವೇಳೆ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯವಾಗಿ ತಾಲೂಕು ಮಟ್ಟದಲ್ಲಿ ಶಾಸಕರು ಯೋಜನೆಗೆ ಚಾಲನೆ ನೀಡಲಿದ್ದಾರೆ.
4,98,30,889 ಜಾತಿ ಪ್ರಮಾಣ ಪತ್ರಗಳು, 2,76,56,058 ಆದಾಯ ಪ್ರಮಾಣ ಪತ್ರಗಳು, 1,74,71,807 ಪಹಣಿಗಳನ್ನು ಮನೆ ಬಾಗಿಲಿಗೆ ತಲುಪಿಸಲು ಯೋಜಿಸಲಾಗಿದೆ. ಈ ಸಂಬಂಧ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರು ಸುತ್ತೋಲೆ ಹೊರಡಿಸಿದ್ದಾರೆ. ಈ ನಿಟ್ಟಿನಲ್ಲಿ ಅಗತ್ಯಕ್ರಮ ಕೈಗೊಳ್ಳಲು ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.