ಪಟ್ನಾ: ಬಿಹಾರದ 72 ವರ್ಷದ ವ್ಯಕ್ತಿಯೊಬ್ಬರ ಹೊಟ್ಟೆಯಿಂದ ತೆಂಗಿನಕಾಯಿ ಗಾತ್ರದ ಗಡ್ಡೆಯನ್ನು ತೆಗೆದುಹಾಕುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ. ದೆಹಲಿಯ ಶ್ರೀ ಗಂಗಾರಾಮ್ ಎಂಬ ಖಾಸಗಿ ಆಸ್ಪತ್ರೆಯ ವೈದ್ಯರು ಈ ಸಾಹಸ ಕಾರ್ಯ ಮಾಡಿದ್ದಾರೆ.
ಆರು ತಿಂಗಳ ಕಾಲ ಉಸಿರಾಟದ ಸಮಸ್ಯೆ ಹಾಗೂ ಆಹಾರ ಸೇವಿಸಲಾಗದೇ ಒದ್ದಾಡುತ್ತಿದ್ದ ರಘುಬೀರ್ ಎಂಬ ವೃದ್ಧರ ಥೈರಾಯ್ಡ್ ಗ್ರಂಥಿಯಲ್ಲಿ ಬೆಳೆದಿದ್ದ ಗಡ್ಡೆ ಇದಾಗಿತ್ತು. ಹಲವಾರು ತಿಂಗಳುಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದ ರಘುಬೀರ್ ಅವರು, ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಥೈರಾಯ್ಡ್ ಗ್ರಂಥಿಯಲ್ಲಿ ತೆಂಗಿನಕಾಯಿ ಗಾತ್ರದ ಗಡ್ಡೆ ಇರುವುದನ್ನು ವೈದ್ಯರು ಗಮನಿಸಿದರು.
ಅವರಿಗೆ ತುಂಬಾ ವಯಸ್ಸಾಗಿದ್ದರಿಂದ ಇದನ್ನು ತೆಗೆಯುವುದು ಸವಾಲಿನ ಕೆಲಸವಾಗಿತ್ತು. ಸ್ವಲ್ಪ ಹೆಚ್ಚೂ ಕಡಿಮೆಯಾದರೂ ಅವರ ಜೀವಕ್ಕೆ ಅಪಾಯವಿತ್ತು. ಹಲವಾರು ಸವಾಲುಗಳ ನಡುವೆಯೇ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ.
ಆಸ್ಪತ್ರೆಯ ಇಎನ್‌ಟಿ ವಿಭಾಗದ ಸಲಹೆಗಾರ ಡಾ. ಸಂಗೀತ್ ಅಗರ್‌ವಾಲ್ ಅವರು ಸುಮಾರು 250 ಕಠಿಣ ಶಸ್ತ್ರಚಿಕಿತ್ಸೆ ನಡೆಸಿದ್ದರೂ ಇದು ವಿಶಿಷ್ಟವಾಗಿದೆ ಎಂದಿದ್ದಾರೆ. ಚಿಟ್ಟೆ ಆಕಾರದ ಥೈರಾಯ್ಡ್ ಗ್ರಂಥಿಯು ಸಾಮಾನ್ಯವಾಗಿ 10-15 ಗ್ರಾಂ ತೂಗುತ್ತದೆ ಮತ್ತು 3-4 ಸೆಂ.ಮೀ ಗಾತ್ರವನ್ನು ಹೊಂದಿದೆ, ಇದು 18-20 ಗಾತ್ರದ ತೆಂಗಿನಕಾಯಿಗಿಂತ ದೊಡ್ಡದಾಗಿತ್ತು. ಅದನ್ನು ತೆಗೆಯುವುದು ಸವಾಲಿನ ಕೆಲಸವಾಗಿತ್ತು ಎಂದು ಅವರು ಹೇಳಿದ್ದಾರೆ.