ಯುವಕನ ಹೊಟ್ಟೆಯಿಂದ ಡಿಯೋಡರೆಂಟ್ ಬಾಟಲಿಯನ್ನು ಹೊರ ತೆಗೆಯಲಾಗಿದೆ. ನಿಜ, ನೀವು ಸರಿಯಾಗಿ ಓದಿದ್ದೀರಿ. ಪಶ್ಚಿಮ ಬಂಗಾಳದ ಬುರ್ದ್ವಾನ್ ಮೆಡಿಕಲ್ ಕಾಲೇಜು ವೆೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಡಿಯೋಡರೆಂಟ್ ಬಾಟಲಿ ಹೊರತೆಗೆದಿದ್ದಾರೆ.
ದಕ್ಷಿಣ 24 ಪರಗಣದ ಪಾರ್ಥಪ್ರತಿಮಾದ 27 ವರ್ಷ ವಯಸ್ಸಿನ ವ್ಯಕ್ತಿ ಹೊಟ್ಟೆ ನೋವಿನಿಂದ ಬಳಲಿದ್ದು ಪರಿಶೀಲನೆ ಒಳಪಡಲು ತುರ್ತು ವಿಭಾಗಕ್ಕೆ ಬಂದಿದ್ದ. ವೈದ್ಯರು ತಕ್ಷಣ ಆತನನ್ನು ದಾಖಲಿಸಿಕೊಂಡು ಶಸ್ತ್ರಚಿಕಿತ್ಸೆಗೆ ಒಳಪಡಿಸಲು ನಿರ್ಧರಿಸಿದರು. ಸದ್ಯ ಆತ ಆರೋಗ್ಯವಾಗಿದ್ದು, ಏಳು ದಿನಗಳ ಕಾಲ ನಿಗಾ ಇಡಲಾಗುವುದು ಎಂದು ವೆೈದ್ಯರು ತಿಳಿಸಿದ್ದಾರೆ.
ಎಕ್ಸ್-ರೇ ವರದಿಯಲ್ಲಿ ಹೊಟ್ಟೆಯೊಳಗೆ ಬಾಟಲಿ ಕಾಣಿಸಿದೆ. ಅದು ಮುಚ್ಚಳ ಸೇರಿದಂತೆ ಸುಮಾರು ಏಳೂವರೆ ಇಂಚು ಉದ್ದವಿತ್ತು. ಎರಡು ಗಂಟೆಗಳ ಶಸ್ತ್ರಚಿಕಿತ್ಸೆಯಲ್ಲಿ ಹೊಟ್ಟೆಯಿಂದ ಬಾಟಲಿಯನ್ನು ತೆಗೆಯಲಾಯಿತು.
ಇದರಿಂದ ಯುವಕನ ಅನ್ನನಾಳಕ್ಕೂ ಹಾನಿಯಾಗಿದೆ. ಅದನ್ನೂ ಶಸ್ತ್ರ ಚಿಕಿತ್ಸೆ ಮೂಲಕ ಸರಿಪಡಿಸಲಾಯಿತು. ಕರುಳುಗಳ ಮೇಲೂ ಸಹ ಪರಿಣಾಮ ಬೀರುತ್ತವೆ, ಭವಿಷ್ಯದಲ್ಲಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದ್ದಾರೆ.