ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳೆಯೊಬ್ಬರು ಇತ್ತೀಚೆಗೆ ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿಸಿದ್ದು, ಬಂದ ಫಲಿತಾಂಶದಿಂದ ವೈದ್ಯರೂ ಸೇರಿದಂತೆ ಕುಟುಂಬ ಸದಸ್ಯರು ದಿಗ್ಬ್ರಮೆಗೊಂಡಿದ್ದಾರೆ. ಮಹಿಳೆಯ ಹೊಟ್ಟೆಯೊಳಗೆ ಕತ್ತರಿ ಕಂಡು ಬಂದಿದ್ದು, ಈ ಹಿಂದೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡ ವೇಳೆ ಅಲ್ಲಿನ ವೈದ್ಯರ ನಿರ್ಲಕ್ಷ್ಯದಿಂದ ಕತ್ತರಿ ದೇಹದಲ್ಲಿಯೇ ಉಳಿದುಕೊಂಡಿತ್ತು ಎನ್ನಲಾಗಿದೆ.
ಭಿಂಡ್ ಜಿಲ್ಲಾ ಆಸ್ಪತ್ರೆಯ ವೈದ್ಯರು ಹಾಗೂ ರೋಗಿಯ ಕುಟುಂಬದವರು ಸಿಟಿ ಸ್ಕ್ಯಾನ್‌ನಲ್ಲಿ ಮಹಿಳೆಯ ಹೊಟ್ಟೆಯಲ್ಲಿ ಕತ್ತರಿ ಪತ್ತೆಯಾಗಿದ್ದರಿಂದ ಆಘಾತಕ್ಕೊಳಗಾಗಿದ್ದರು. ಭಿಂಡ್ ಜಿಲ್ಲಾ ಆಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಉಸ್ತುವಾರಿ ಸತೀಶ್ ಶರ್ಮಾ ಅವರು ಕಮಲಾ ಎಂಬ ಮಹಿಳೆಯ ಸಿಟಿ ಸ್ಕ್ಯಾನ್ ಮಾಡುತ್ತಿದ್ದಾಗ ಈ ಘಟನೆ ಬೆಳಕಿಗೆ ಬಂದಿತ್ತು.
ವರದಿಗಳ ಪ್ರಕಾರ, ಎರಡು ವರ್ಷಗಳ ಹಿಂದೆ, ಮಹಿಳೆಗೆ ಗ್ವಾಲಿಯರ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ಈ ವೇಳೆ ವೈದ್ಯರು ಕತ್ತರಿಯನ್ನು ಹೊಟ್ಟೆಯಲ್ಲಿಯೇ ಮರೆತಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಭಿಂಡ್ ಜಿಲ್ಲೆಯ ನಿವಾಸಿ ಕಮಲಾ ಅವರಿಗೆ ಕ್ಯಾನ್ಸರ್‌ಗಾಗಿ 20 ಫೆಬ್ರವರಿ 2022 ರಂದು ಗ್ವಾಲಿಯರ್‌ನ ಕಮಲಾ ರಾಜ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು.
ಆಪರೇಷನ್ ವೇಳೆ ವೈದ್ಯರು ನಿರ್ಲಕ್ಷ್ಯ ವಹಿಸಿ ಕತ್ತರಿ ಮರೆತಿದ್ದು, ಮಹಿಳೆಗೆ ಇದರ ಅರಿವೇ ಇರಲಿಲ್ಲ. ಆದರೆ ಕಳೆದ ಕೆಲ ದಿನಗಳಿಂದ ಮಹಿಳೆಗೆ ತೀವ್ರತರವಾದ ಹೊಟ್ಟೆನೋವು ಕಾಣಿಸಿಕೊಂಡಿದ್ದು, ಔಷಧಿ ನೀಡಿದರೂ ನೋವು ಕಡಿಮೆಯಾಗದಿದ್ದಾಗ ವೈದ್ಯರು ಸಿಟಿ ಸ್ಕ್ಯಾನ್ ಮಾಡುವಂತೆ ಸೂಚಿಸಿದ್ದರು. ಈ ವೇಳೆ ಹೊಟ್ಟೆಯಲ್ಲಿ ಕತ್ತರಿ ಸ್ಪಷ್ಟವಾಗಿ ಗೋಚರಿಸಿದೆ.
ಹೊಟ್ಟೆಯಲ್ಲಿದ್ದ ಕತ್ತರಿ ಮಹಿಳೆಗೆ ಮಾರಕವಾಗಬಹುದು ಎನ್ನಲಾಗಿದ್ದು, ಇದೀಗ ಕುಟುಂಬ ಸದಸ್ಯರು ವೈದ್ಯಕೀಯ ನಿರ್ಲಕ್ಷ್ಯದ ವಿರುದ್ದ ನ್ಯಾಯಾಲಯದ ಮೊರೆ ಹೋಗುತ್ತೇವೆ ಹಾಗೂ ನಿರ್ಲಕ್ಷ್ಯ ತೋರಿದ ವೈದ್ಯರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ. ಜಿಲ್ಲಾಸ್ಪತ್ರೆಯಲ್ಲಿ ಸಿಟಿ ಸ್ಕ್ಯಾನ್ ಮಾಡಿರುವ ವೈದ್ಯ ಸತೀಶ್ ಶರ್ಮಾ ಕೂಡ ಹೊಟ್ಟೆಯೊಳಗೆ ಕತ್ತರಿ ಇರುವುದನ್ನು ಖಚಿತಪಡಿಸಿದ್ದಾರೆ.