ಚಾಮರಾಜನಗರ: ಜಿಲ್ಲೆಯಲ್ಲಿ ಕೊರೋನಾ ಲಸಿಕೆ ಪಡೆದಿದ್ದ ಐವರು ವೈದ್ಯರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಒಂದು ವಾರದ ಅವಧಿಯಲ್ಲಿ ಜಿಲ್ಲೆಯಲ್ಲಿ 7 ಮಂದಿ ವೈದ್ಯರಿಗೆ ಸೋಂಕು ತಗುಲಿರುವುದು ಧೃಢಪಟ್ಟಿದೆ. ಇವರಲ್ಲಿ ಐದು ಮಂದಿ ಇತ್ತೀಚೆಗೆ ಲಸಿಕೆ ಹಾಕಿಸಿಕೊಂಡಿದ್ದರು. ಲಸಿಕೆ ಪಡೆದ ಐವರು ವೈದ್ಯರಲ್ಲಿ ಇಬ್ಬರಿಗೆ ಕೋವಿಶೀಲ್ಡ್ ಮತ್ತು ಮೂವರಿಗೆ ಕೊವ್ಯಾಕ್ಸಿನ್ ಲಸಿಕೆ ನೀಡಲಾಗಿದೆ. ಇವರಲ್ಲಿ ನಾಲ್ವರು ಹೋಂ ಐಸೋಲೇಷನ್ ನಲ್ಲಿದ್ದಾರೆ. ಒಬ್ಬರು ಜಿಲ್ಲಾ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜನವರಿ 16 ರಿಂದ ಲಸಿಕೆ ಅಭಿಯಾನ ಆರಂಭವಾಗಿದ್ದು, ಲಸಿಕೆ ಹಾಕಿಸಿಕೊಂಡ ವಾರದ ನಂತರ ವೈದ್ಯರಿಗೆ ಸೋಂಕು ತಗಲಿದೆ ಎಂದು ಹೇಳಲಾಗಿದೆ. ಅಂದ ಹಾಗೆ, ಈ ವೈದ್ಯರು ಒಂದು ಡೋಸ್ ಮಾತ್ರ ಲಸಿಕೆ ಪಡೆದಿದ್ದಾರೆ. ಇನ್ನೂ ಒಂದು ಲಸಿಕೆ ಪಡೆಯುವುದು ಬಾಕಿ ಇದೆ. ಮೊದಲ ಲಸಿಕೆ ಪಡೆದ ನಾಲ್ಕು ವಾರದ ನಂತರ ಎರಡನೇ ಡೋಸ್ ಲಸಿಕೆ ನೀಡಲಾಗುವುದು. ಎರಡು ಸಲ ಲಸಿಕೆ ಪಡೆದ ನಂತರ ದೇಹದಲ್ಲಿ ರೋಗನಿರೋಧಕ ಶಕ್ತಿ ಸೃಷ್ಟಿಯಾಗಲಿದೆ. ಲಸಿಕೆ ಹಾಕಿದ ಕೂಡಲೇ ಆಂಟಿ ಬಾಡಿ ಸೃಷ್ಟಿಯಾಗುವುದಿಲ್ಲ ಎಂದು ಹೇಳಲಾಗಿದೆ.