ಇದೀಗ ವೈದ್ಯಕೀಯ ಶಿಕ್ಷಣವನ್ನು ಇಂಗ್ಲಿಷ್ ಜೊತೆಗೆ ಹಿಂದಿಯಲ್ಲೂ ಬೋಧಿಸಲಾಗುತ್ತಿದ್ದು, ಮಧ್ಯಪ್ರದೇಶ ಇದನ್ನು ಜಾರಿಗೆ ತಂದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕೇಂದ್ರ ಗೃಹ ಸಚಿವ ಅಮಿತ್ ಷಾ ಎರಡು ದಿನಗಳ ಹಿಂದೆ ವೈದ್ಯಕೀಯ ಶಿಕ್ಷಣದ ಹಿಂದಿ ಪಠ್ಯಗಳನ್ನು ಬಿಡುಗಡೆ ಮಾಡಿದ್ದಾರೆ.
ಇದರ ಮಧ್ಯೆ ಮಧ್ಯಪ್ರದೇಶದ ಸತನಾ ಜಿಲ್ಲೆಯ ಕೋಟರ್ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ವೈದ್ಯಾಧಿಕಾರಿ ಡಾ. ಸರ್ವೇಶ್ ಸಿಂಗ್ ಎಂಬವರು ತಮ್ಮಲ್ಲಿಗೆ ಬಂದ ರೋಗಿಗಳಿಗೆ ಹಿಂದಿಯಲ್ಲಿ ಔಷಧ ಪ್ರಿಸ್ಕ್ರಿಪ್ಷನ್ ಬರೆದುಕೊಡುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಅಲ್ಲದೆ ಪ್ರಿಸ್ಕ್ರಿಪ್ಷನ್ ಮೇಲ್ಭಾಗದಲ್ಲಿ ಆರ್ ಎಕ್ಸ್ ಬದಲು ಶ್ರೀ ಹರಿ ಎಂದು ಸಂಭೋಧಿಸಿದ್ದು, ಇದರ ಫೋಟೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಕುರಿತಂತೆ ಪ್ರತಿಕ್ರಿಯಿಸಿರುವ ಡಾ. ಸರ್ವೇಶ್ ಸಿಂಗ್, ಮುಖ್ಯಮಂತ್ರಿ ಶಿವರಾಜ್ ಸಿಂಗ್ ಅವರ ಸೂಚನೆಯನ್ನು ನಾನು ಪಾಲಿಸಿದ್ದೇನೆ ಎಂದಿದ್ದಾರೆ. ಇತ್ತೀಚೆಗಷ್ಟೇ ಶಿವರಾಜ್ ಸಿಂಗ್ ವೈದ್ಯರು ಹಿಂದಿಯಲ್ಲಿ ಪ್ರಿಸ್ಕ್ರಿಪ್ಷನ್ ಬರೆಯಬೇಕು ಹಾಗೂ ಆರ್ ಎಕ್ಸ್ ಬದಲು ಶ್ರೀ ಹರಿ ಎಂದು ಸಂಬೋಧಿಸಬೇಕು ಎಂದು ಸಲಹೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.