ಮಂಗಳೂರು: ಸಮುದ್ರ ವಿಹಾರಕ್ಕೆ ಬಂದಿದ್ದ ವೈದ್ಯನೊಬ್ಬ ಸ್ನೇಹಿತನನ್ನು ರಕ್ಷಿಸಲು ಹೋಗಿ ಸಮುದ್ರ ಪಾಲಾಗಿರುವ ಘಟನೆ ಮಂಗಳೂರಿನ ಸೋಮೇಶ್ವರ ರುದ್ರಪಾದೆ ಬಳಿ ನಡೆದಿದೆ.
ಆಶಿಕ್ ಗೌಡ (30) ಸಮುದ್ರ ಪಾಲಾಗಿರುವ ವೈದ್ಯ. ಮೂಲತ: ಬೆಂಗಳೂರಿನ ಆಶಿಕ್ ಗೌಡ ಮಂಗಳೂರಿನ ಖಾಸಗಿ ಅಸ್ಪತ್ರೆಯಲ್ಲಿ ಇಂಟರ್ನ್ ಶಿಪ್ ಮಾಡುತ್ತಿದ್ದರು.
ಆಶಿಕ್ ಗೌಡ, ಡಾ.ಪ್ರದೀಶ್ ಸೇರಿದಂತೆ ಐವರು ವೈದ್ಯರು ತಡರಾತ್ರಿ ಸೋಮೇಶ್ವರ ಕಡಲಿಗೆ ಸಮುದ್ರ ವಿಹಾರಕ್ಕೆ ಹೊರಟಿದ್ದರು. ರುದ್ರಪಾದೆ ಬಳಿ ಕಲ್ಲಿನ ಬಂಡೆಯ ಮೇಲೆ ನಿಂತಿದ್ದ ಡಾ.ಪ್ರದೀಶ್ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದಾರೆ. ಈ ವೇಳೆ ರಕ್ಷಣೆಗಾಗಿ ಕೈ ಚಾಚಿದ್ದ ಪ್ರದೀಶ್ ನನ್ನು ರಕ್ಷಿಸಲು ಆಶಿಕ್ ಗೌಡ ಯತ್ನಿಸಿದ್ದರು. ಈ ವೇಳೆ ಕಾಲು ಜಾರಿ ಅವರು ಸಮುದ್ರ ಪಾಲಾಗಿದ್ದಾರೆ.
ಕಲ್ಲಬಂಡೆಗಳ ಆಸರೆ ಪಡೆದು ಪ್ರದೀಶ್ ಜೀವ ಉಳಿಸಿಕೊಂಡಿದ್ದಾರೆ. ಆದರೆ ಸ್ನೇಹಿತನ ರಕ್ಷಣೆಗೆ ಹೋಗಿ ಆಶಿಕ್ ಸಮುದ್ರ ಪಾಲಾಗಿದ್ದಾರೆ. ಘಟನೆ ಬಗ್ಗೆ ಪ್ರದೀಶ್ ತಕ್ಷಣ ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ರಕ್ಷಣಾ ಕಾರ್ಯಾಚರಣೆ ವೇಳೆ ರುದ್ರಪಾದೆ ಬಳಿ ಇಂದು ಬೆಳಿಗ್ಗೆ ಆಶಿಕ್ ಮೃತದೇಹ ಸಿಕ್ಕಿದೆ.
ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.