ಗದಗ: ಜಿಲ್ಲಾಸ್ಪತ್ರೆಯ ವೈದ್ಯನೊಬ್ಬ ಬಾಣಂತಿ ಹಾಗೂ ನವಜಾತ ಶಿಶುವಿಗೆ ಸರಿಯಾಗಿ ಚಿಕಿತ್ಸೆ ಕೊಡದೇ ನಿರ್ಲಕ್ಷ್ಯವಹಿಸಿದ್ದು, ಇದನ್ನು ಪ್ರಶ್ನಿಸಿದ್ದಕ್ಕೆ ಗಲಾಟೆ ಮಾಡಿ ರೌಡಿಯಂತೆ ವರ್ತಿಸಿ ರೋಗಿಗೆ ಆವಾಜ್ ಹಾಕಿರುವ ಘಟನೆ ಗದಗದಲ್ಲಿ ನಡೆದಿದೆ.
ಗದಗ ಜಿಲ್ಲಾಸ್ಪತ್ರೆಯ ಹೆರಿಗೆ ವಾರ್ಡ್ ನಲ್ಲಿ ಕೆಲಸ ಮಡುತ್ತಿದ್ದ ವೈದ್ಯ ಗೌತಮ್ ಆಸ್ಪತ್ರೆಗೆ ದಾಖಲಾಗಿದ್ದ ಬಾಣಂತಿ ಸಂಬಂಧಿಕರ ಜೊತೆ ಅನುಚಿತವಗಿ ವರ್ತಿಸಿದ್ದಲ್ಲದೇ ಬೆದರಿಕೆ ಹಾಕಿದ್ದಾನೆ.
ಸೂರಣಗಿ ಗ್ರಾಮದ ಹುಸೇನಬಿ ಹೊಳಲ ಎಂಬುವವರ ಹೆರಿಗೆಯಾಗಿದ್ದು, ಮಗು ಅಸ್ತಮಾದಿಂದ ಬಳಲುತ್ತಿತ್ತು. ಮಗುವಿಗೆ ಸೂಕ್ತ ಚಿಕಿತ್ಸೆ ನೀಡದೇ ನಿರ್ಲಕ್ಷ್ಯ ಮಾಡುತ್ತಿದ್ದ ವೈದ್ಯ ಹಾಗೂ ಸಿಬ್ಬಂದಿಯನ್ನು ಹುಸೇನಬಿ ಪತಿ ಮುಸ್ತಾಕ್ ಪ್ರಶ್ನಿಸಿದ್ದಾರೆ. ಇದಕ್ಕೆ ಕೋಪಗೊಂಡ ಡಾಕ್ಟರ್, ಇಲ್ಲಿ ನಾನಾಡಿದ್ದೇ ಆಟ, ನಾನೇ ಡಾಕ್ಟರ್. ನಾನು ಹೇಗಿರಬೇಕು ಹಾಗೆ ಇರ್ತೀನಿ ಅದನ್ನು ಕೇಳಲು ನೀನ್ಯಾರು? ಸ್ಟೆಥಸ್ಕೋಪ್ ಹಾಕಿಕೊಂಡ್ರೆ ಡಾಕ್ಟರ್, ಲಾಂಗು, ಮಚ್ಚು ಹಿಡಿದ್ರೆ ರೌಡಿ. ಇಲ್ಲಿ ಡಿಸಿ, ಎಸ್ ಪಿ, ಮೀಡಿಯಾ ಯಾರೇ ಬಂದ್ರೂ ಏನೂ ಮಾಡೋಕಾಗಲ್ಲ… ಏನು ಪ್ರೆಸ್ ಮೀಟ್ ಮಾಡ್ತೀಯಾ ಮಾಡು ನನ್ನ ಊರು ಕುರಹಟ್ಟಿಗೆ ಬಾ ಅಲ್ಲಿ ನೋಡ್ಕೋತೀನಿ ನಿನ್ನ ಎಂದು ಆವಾಜ್ ಹಾಕಿದ್ದಾನೆ.
ಅಲ್ಲದೇ ಶರ್ಟ್ ತೆಗೆದು ರೌಡಿಗಳಂತೆ ವರ್ತಿಸಿ ಏನು ಮಾಡ್ಕೋತಿಯೋ ಮಾಡ್ಕೋ ಎಂದು ಗದರಿದ್ದಾನೆ. ವೈದ್ಯನ ದರ್ಪ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರು ವೈದ್ಯನ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.