ಆರು ವರ್ಷದ ಕ್ಯಾನ್ಸರ್ ರೋಗಿಯ ಕುರಿತಾದ ಕಣ್ಣೀರು ತರಿಸುವ ಕಥೆಯೊಂದನ್ನು ವೈದ್ಯರು ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ಜನರನ್ನು ಕಣ್ಣೀರಿನಲ್ಲಿ ತೇಲಿಸಿದೆ. ಕ್ಯಾನ್ಸರ್ ತಜ್ಞ ಡಾ ಸುಧೀರ್ ಕುಮಾರ್ ಅವರು ಟ್ವಿಟ್ಟರ್‌ನಲ್ಲಿ ಇದನ್ನು ಶೇರ್ ಮಾಡಿಕೊಂಡಿದ್ದಾರೆ.
“ಡಾಕ್ಟರ್, ನನಗೆ ಗ್ರೇಡ್ 4 ಕ್ಯಾನ್ಸರ್ ಇದೆ ಮತ್ತು ಇನ್ನೂ 6 ತಿಂಗಳು ಮಾತ್ರ ಬದುಕುತ್ತೇನೆ, ಈ ಬಗ್ಗೆ ನನ್ನ ಪೋಷಕರಿಗೆ ಹೇಳಬೇಡಿ” ಎಂದು ಬಾಲಕ ಹೇಳಿದ್ದ ಎಂದು ವೈದ್ಯರು ತಿಳಿಸಿದ್ದಾರೆ. ಆದರೆ ವಿಚಿತ್ರ ಎಂದರೆ, ಈತನ ಪಾಲಕರಿಗೂ ವಿಷಯ ತಿಳಿದಿದ್ದು ಅವರು ಕೂಡ ವೈದ್ಯರ ಬಳಿ ಬಂದು ಮಗನಿಗೆ ವಿಷಯ ತಿಳಿಸಬೇಡಿ ಎಂದಿದ್ದರು!
“‘ದಯವಿಟ್ಟು ಮಗನಿಗೆ ವಿಷಯ ತಿಳಿಸಬೇಡಿ ಎಂದು ಪಾಲಕರು ಹೇಳಿದ್ದರು. ಅವರ ಕೋರಿಕೆಯನ್ನು ಸ್ವೀಕರಿಸಿ ನಾನು ತಲೆಯಾಡಿಸಿದೆ. ವೀಲ್‌ಚೇರ್‌ನಲ್ಲಿ ಬಾಲಕ ಮನುನನ್ನು ಕರೆತರಲಾಗಿತ್ತು . ಆತ ನಗುತ್ತಿದ್ದ. ಆತ್ಮವಿಶ್ವಾಸ ಹೊಂದಿದ್ದ. ಆದರೆ ಅಪ್ಪ-ಅಮ್ಮನಿಗೆ ವಿಷಯ ತಿಳಿಸಬೇಡಿ ಎಂದಿದ್ದ” ಎಂದು ವೈದ್ಯರು ಬರೆದುಕೊಂಡಿದ್ದಾರೆ.
ಬಾಲಕ ಮನು ಐಪ್ಯಾಡ್‌ನಲ್ಲಿ ರೋಗದ ಬಗ್ಗೆ ಎಲ್ಲವನ್ನೂ ಓದಿದ್ದೇನೆ ಎಂದು ಹೇಳಿದ್ದ. ತಾನು ಇನ್ನೂ 6 ತಿಂಗಳು ಮಾತ್ರ ಬದುಕುತ್ತೇನೆ ಎಂದು ನನಗೆ ತಿಳಿದಿದೆ. ಆದರೆ ನಾನು ಇದನ್ನು ನನ್ನ ಪೋಷಕರೊಂದಿಗೆ ಹಂಚಿಕೊಂಡಿಲ್ಲ. ಅವರು ಅಸಮಾಧಾನಗೊಳ್ಳುತ್ತಿದ್ದರು. ಅವರು ನನ್ನನ್ನು ತುಂಬಾ ಪ್ರೀತಿಸುತ್ತಾರೆ. ದಯವಿಟ್ಟು ಅವರೊಂದಿಗೆ ಹಂಚಿಕೊಳ್ಳಬೇಡಿ ಎಂದು ಮನವಿ ಮಾಡಿಕೊಂಡಿದ್ದ ಎಂದು ಅವರು ತಿಳಿಸಿದ್ದಾರೆ.
ಆದರೆ ಬಾಲಕ ಎಂಟು ತಿಂಗಳು ಬದುಕಿದ್ದ. ಬದುಕಿನ ಉದ್ದಕ್ಕೂ ಖುಷಿಯಾಗಿಯೇ ಇದ್ದ. ಈತನನ್ನುನೋಡಿಕೊಳ್ಳಲು ಅಪ್ಪ-ಅಮ್ಮ ಕೆಲಸ ತೊರೆದಿದ್ದರು ಎಂದು ಭಾವುಕ ಟ್ವೀಟ್ ಮಾಡಿದ್ದಾರೆ.