ಬೆಳಗಾವಿ: ವೈದ್ಯರ ನಿರ್ಲಕ್ಷಕ್ಕೆ ಬಾಣಂತಿ ಹಾಗೂ ಮಗು ಇಬ್ಬರು ಸಾವನ್ನಪ್ಪಿರುವ ಘಟನೆ ಬೆಳಗಾವಿಯ ಕಿಣೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ನಡೆದಿದೆ.
ಸಂತಿಬಸ್ತಿವಾಡ ಗ್ರಾಮದ ಲಕ್ಷ್ಮೀ ಹಳ್ಳಿ (28) ಮೃತ ಬಾಣಂತಿ. ವೈದ್ಯರ ನಿರ್ಲಕ್ಷದಿಂದಲೇ ತಾಯಿ-ಮಗು ಮೃತಪಟ್ಟಿದ್ದಾರೆ ಎಂದು ಕುಟುಂಬದವರು ಆರೋಪಿಸಿದ್ದು ವೈದ್ಯರ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಲಕ್ಷ್ಮೀ ಹಳ್ಳಿಗೆ ಹೆರಿಗೆ ನೋವು ಕಾಣಿಸಿಕೊಂಡ ಕಾರಣ ತಡರಾತ್ರಿ ಬೆಳಗಾವಿ ತಾಲೂಕಿನ ಕಿಣೆ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿತ್ತು. ಇಂದು ಬೆಳಿಗ್ಗೆ ಹೆಣ್ಣುಮಗುವಿಗೆ ಜನ್ಮ ನೀಡಿದ್ದರು. ಬಾಣಂತಿಗೆ ತೀವ್ರ ರಕ್ತಸ್ರಾವವಾಗುತ್ತಿದ್ದಂತೆ ಬೆಳಗಾವಿ ಭಿಮ್ಸ್ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದ್ದಾರೆ. ವೈದ್ಯರ ಸಲಹೆಯಂತೆ ಬಾಣಂತಿ ಮಗುವನ್ನು ಭಿಮ್ಸ್ ಆಸ್ಪತ್ರೆಗೆ ಸಾಗಿಸುತ್ತಿದ್ದಾಗ ಮಾರ್ಗ ಮಧ್ಯೆಯೇ ಬಾಣಂತಿ ಹಾಗೂ ಮಗು ಕೊನೆಯುಸಿರೆಳೆದಿದ್ದಾರೆ.
ತಾಯಿ ಮಗು ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ ವೈದ್ಯರ ವಿರುದ್ಧ ಕಠಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕುಟುಂಬದವರು ಪ್ರತಿಭಟನೆ ನಡೆಸಿದ್ದಾರೆ. ಬೆಳಗಾವಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.