ಹಾಸನ: ಸರ್ಕಾರಿ ಕಚೇರಿ, ಬ್ಯಾಂಕ್ ಸೇರಿದಂತೆ ಕರ್ನಾಟಕದಲ್ಲಿ ಕಡ್ಡಾಯವಾಗಿ ಕನ್ನಡದಲ್ಲೇ ವ್ಯವಹರಿಸಬೇಕು ಎಂದು ರಾಜ್ಯ ಸರ್ಕಾರ ಸೂಚಿಸಿರುವ ಬೆನ್ನಲ್ಲೇ ಬಹುತೇಕ ಕ್ಷೇತ್ರಗಳು ಕನ್ನಡಮಯವಾಗುತ್ತಿದೆ. ಇದು ರಾಜ್ಯದ ಜನತೆಯಲ್ಲಿ ಸಂತಸ ಮೂಡಿಸಿದೆ. ಕರ್ನಾಟಕದಲ್ಲಿ ಪ್ರತಿಯೊಂದು ಕ್ಷೇತ್ರ, ವ್ಯವಹಾರ ಎಲ್ಲವೂ ಕನ್ನಡದಿಯೇ ಇದ್ದರೆ ಪ್ರತಿಯೊಬ್ಬರಿಗೂ ಸುಲಭವಾಗಿ ಅರ್ಥವಾಗುತ್ತದೆ. ಇದೀಗ ವೈದ್ಯಕೀಯ ಕ್ಷೇತ್ರಗಳಲ್ಲಿಯೂ ಕನ್ನಡ ರಾರಾಜಿಸುತ್ತಿರುವುದು ವಿಶೇಷ. ಅದರಲ್ಲಿಯೂ ವೈದ್ಯರು ಕೂಡ ಕನ್ನಡದಲ್ಲಿಯೇ ಸಲಹಾ ಚೀಟಿ ಬರೆದುಕೊಡುತ್ತಿರುವುದು ನಿಜಕ್ಕೂ ಶ್ಲಾಘನೀಯ.
ಕೆಲದಿನಗಳ ಹಿಂದಷ್ಟೇ ಡಾ.ಹರಿಪ್ರಸಾದ್ ಎಂಬುವವರು ಕನ್ನಡದಲ್ಲಿ ಬರೆದುಕೊಟ್ಟ ಪ್ರಿಸ್ ಕ್ರಿಪ್ಶನ್ ಭಾರಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಇದೀಗ ಹಾಸನ ಜಿಲ್ಲೆಯ ಹೊಳೆನರಸೀಪುರದ ವೈದ್ಯರೊಬ್ಬರು ಕನ್ನಡದಲ್ಲಿ ಬರೆದಿರುವ ಪ್ರಿಸ್ ಕ್ರಿಪ್ಶನ್ ವೈರಲ್ ಆಗಿದೆ.
ಸಾಮಾನ್ಯವಾಗಿ ವೈದ್ಯರು ಬರೆದುಕೊಡುವ ಪ್ರಿಸ್ ಕ್ರಿಪ್ಶನ್ ಓದುವುದು, ಅದರಲ್ಲಿ ಬರೆದಿರುವ ಔಷಧಗಳ ಬಗ್ಗೆ ಅರ್ಥಮಾಡಿಕೊಳ್ಳುವುದೇ ಒಂದು ದೊಡ್ಡ ತಲೆನೋವಾಗಿ ಬಿಡುತ್ತದೆ. ಹೀಗಿರುವಾಗ ಈಗ ವೈದ್ಯರು ಕೂಡ ಕನ್ನಡದಲ್ಲಿಯೇ ಪ್ರಿಸ್ ಕ್ರಿಪ್ಶನ್ ಬರೆದುಕೊಡುವುದರಿಂದ ಕನ್ನಡ ಬರುವ ಪ್ರತಿಯೊಬ್ಬರು ಓದಿ ಅರ್ಥೈಸಿಕೊಂಡು ಔಷಧ ಅಂಗಡಿಗಳಲ್ಲಿಯೂ ನಾವೇ ಹೇಳಿ ಔಷಧಿ ಪಡೆಯಬರುದು. ಹೊಳೆನರಸಿಪುರದ ಜನರಲ್ ಆಸ್ಪತ್ರೆ ವೈದ್ಯರೊಬ್ಬರು ಕನ್ನಡದಲ್ಲಿ ಬರೆದಿರುವ ಔಷಧ ಚೀಟಿ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ವೈದ್ಯರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.