ಮಂಗಳೂರು: ವಿದ್ಯಾರ್ಥಿನಿ ಮಮತಾ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ವೈದ್ಯಾಧಿಕಾರಿಯನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದು, ಗ್ರಾಮಸ್ಥರ ಪ್ರಶ್ನೆಗೆ ಭಯಗೊಂಡ ಮಹಿಳಾ ವೈದ್ಯಾಧಿಕಾರಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾದ ಘಟನೆ ನಡೆದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ಗ್ರಾಮಸ್ಥರ ಪ್ರಶ್ನೆಗಳಿಗೆ ಒತ್ತಡಕ್ಕೊಳಗಾದ ಮಹಿಳಾ ವೈದ್ಯಾಧಿಕಾರಿ ಕುಸಿದು ಬಿದ್ದಿದ್ದು, ಅವರಿಗೆ ಗರ್ಭಪಾತವಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ವೈದ್ಯಾಧಿಕಾರಿಗಳ ಸಂಘ ಗ್ರಾಮಸ್ಥರ ವಿರುದ್ಧ ಪೊಲೀಸರಿಗೆ ದೂರು ನೀಡಿದೆ.
ಗ್ರಾಮಸಭೆ ವೇಳೆ ಗ್ರಾಮಸ್ಥರು ಕೇಳಿದ ಪ್ರಶ್ನೆಗಳಿಗೆ ನೆಲ್ಯಾಡಿ ಪ್ರಾಥಮಿಕ ಆರೋಗ್ಯಕೇಂದ್ರದ ಮಹಿಳಾ ವೈದ್ಯಾಧಿಕಾರಿ ಡಾ.ಶಿಶಿರಾ ಸಮರ್ಪಕವಾಗಿ ಉತ್ತರ ನೀಡಿದ್ದಾರೆ. ಆದರೂ ಗ್ರಮಸ್ಥರು ಪ್ರಶ್ನಿಸುವುದನ್ನು ಬಿಟ್ಟಿಲ್ಲ. ಗ್ರಾಮಸ್ಥರ ನಡೆಯಿಂದ ವಿಚಲಿತರಾದ ವೈದ್ಯಾಧಿಕಾರಿ ಒಂದು ಗ್ಲಾಸ್ ನೀರು ಕುಡಿದು ಸಾವರಿಸಿಕೊಂಡಿದ್ದಾರೆ. ಆದರೂ ಗ್ರಾಮಸ್ಥರು ಅಧಿಕಾರಿಯನ್ನು ಮತ್ತೆ ಮತ್ತೆ ಪ್ರಶ್ನಿಸಿ, ವಿದ್ಯಾರ್ಥಿನಿ ಸಾವಿಗೆ ಸ್ಪಷ್ಟ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ. ಇದರಿಂದ ಸಭೆಯಿಂದ ಎದ್ದುಹೋದ ಡಾ.ಶಿಶಿರಾ ಗ್ರಾಮಸಭೆ ಆವರಣದಲ್ಲಿಯೇ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಪುತ್ತೂರು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಆದರೆ ಅವರಿಗೆ ಗರ್ಭಪಾತವಾಗಿದೆ ಎಂದು ತಿಳಿದುಬಂದಿದೆ.
ಪ್ರಸ್ತುತ ಡಾ.ಶಿಶಿರಾ ಅವರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ. ಈ ನಡುವೆ ವೈದ್ಯಾಧಿಕಾರಿಗಳ ಸಂಘ, ಕೆಲ ಗ್ರಾಮಸ್ಥರ ವಿರುದ್ಧ ಉಪ್ಪಿನಂಗಡಿ ಪೊಲೀಸ್ ಠಣೆಯಲ್ಲಿ ದೂರು ದಾಖಲಿಸಿದೆ.