ಕಳೆದು ಶುಕ್ರವಾರ ಸುಲ್ತಾನ್ ಪುರದ ಬಳಿ ಪೂರ್ವಾಚಲ್ ಎಕ್ಸ್ ಪ್ರೆಸ್ ವೇನಲ್ಲಿ ಸಂಭವಿಸಿದ ಭೀಕರ ಕಾರು ಅಪಘಾತದಲ್ಲಿ ವೈದ್ಯ, ಇಂಜಿನಿಯರ್ ಸೇರಿದಂತೆ ನಾಲ್ವರು ಸಾವನ್ನಪ್ಪಿದ್ದಾರೆ. ಇವರುಗಳು ಬಿಹಾರದಿಂದ ದೆಹಲಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಅಪಘಾತ ಸಂಭವಿಸಿದ್ದು, ನಾಲ್ವರೂ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾರೆ.
ಬಿಹಾರದ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿರುವ ಡಾ. ಆನಂದ ಪ್ರಕಾಶ್ ಇತ್ತೀಚೆಗಷ್ಟೇ ದೆಹಲಿಯ ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರೊಬ್ಬರಿಂದ ಐಷಾರಾಮಿ ಬಿಎಂಡಬ್ಲ್ಯೂ ಕಾರನ್ನು ಖರೀದಿಸಿದ್ದು, ಇದರಲ್ಲಿ ಸ್ನೇಹಿತರಾದ ದೀಪಕ್ ಕುಮಾರ್, ಅಖಿಲೇಶ್ ಸಿಂಗ್ ಹಾಗೂ ಮುಕೇಶ್ ಎಂಬವರ ಜೊತೆ ದೆಹಲಿಗೆ ತೆರಳುತ್ತಿದ್ದರು ಎನ್ನಲಾಗಿದೆ. 35 ವರ್ಷದ ಆಸುಪಾಸಿನ ಇವರೆಲ್ಲರೂ ಇದೇ ಸಂದರ್ಭದಲ್ಲಿ ತಮ್ಮ ಪ್ರಯಾಣದ ದೃಶ್ಯವನ್ನು ಫೇಸ್ ಬುಕ್ ಲೈವ್ ಮಾಡಿದ್ದಾರೆ.
ಕಾರಿನ ಸ್ಪೀಡೋಮೀಟರ್ ಗೆ ಕ್ಯಾಮೆರಾ ಹಿಡಿದವರೊಬ್ಬರು, ನಮ್ಮ ಕಾರು 230 ಕಿಲೋಮೀಟರ್ ವೇಗದಲ್ಲಿ ಹೋಗುತ್ತಿದೆ. ಸ್ವಲ್ಪ ಹೊತ್ತಿನಲ್ಲಿ ಇದು 300 ಕಿಲೋಮೀಟರ್ ತಲುಪಲಿದೆ ಎಂದು ಇದರಲ್ಲಿ ಹೇಳಿದ್ದು, ಇದೇ ವೇಳೆ ಕಾರಿನಲ್ಲಿದ್ದ ಒಬ್ಬರು ಇನ್ನೂ ವೇಗದಲ್ಲಿ ಹೋದರೆ ನಾವು ನಾಲ್ವರು ಸಾಯುತ್ತೇವೆ ಎಂದು ತಮಾಷೆ ಮಾಡಿದ್ದಾರೆ. ಆದರೆ ಅವರ ಈ ಮಾತು ಸ್ವಲ್ಪ ಹೊತ್ತಿನಲ್ಲೇ ನಿಜವಾಗಿತ್ತು. ಕೆಲ ಕ್ಷಣದಲ್ಲೇ ಇವರುಗಳಿದ್ದ ಕಾರಿಗೆ ಟ್ರಕ್ ಡಿಕ್ಕಿ ಹೊಡೆದಿದ್ದು, ಇದರ ಪರಿಣಾಮ ನಾಲ್ವರ ದೇಹಗಳು ಚೆಲ್ಲಾಪಿಲಿಯಾಗಿ ಎಲ್ಲೆಂದರಲ್ಲಿ ಬಿದ್ದಿದ್ದು, ಅಪಘಾತದ ಭೀಕರತೆಯನ್ನು ಸಾರಿತ್ತು.