ವೈದ್ಯರು ರೋಗಿಯ ದೇಹ ಮುಟ್ಟದೆ ತಪಾಸಣೆ ನಡೆಸುವುದು ಅಸಾಧ್ಯ ಎಂದು ಹೇಳಿರುವ ಕೇರಳ ಹೈಕೋರ್ಟ್, ಹೀಗಾಗಿ ತನ್ನ ಪತ್ನಿಯ ಮೈ ಮುಟ್ಟಿ ಅಸಭ್ಯ ವರ್ತನೆ ತೋರಲಾಗಿದೆ ಎಂದು ಆರೋಪಿಸಿ ವ್ಯಕ್ತಿಯೊಬ್ಬ ವೈದ್ಯರ ಮೇಲೆ ಹಲ್ಲೆ ಮಾಡಿದ್ದ ಪ್ರಕರಣದಲ್ಲಿ ಆತನಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಲಾಗಿದೆ.
ಪ್ರಕರಣದ ವಿವರ: ಜನವರಿ 8ರಂದು ಸಂಜೆ 6 ಗಂಟೆ ಸುಮಾರಿಗೆ ಆಸ್ಪತ್ರೆಯೊಂದರಲ್ಲಿ ಈ ಘಟನೆ ನಡೆದಿದ್ದು, ವ್ಯಕ್ತಿಯೊಬ್ಬ ತನ್ನ ಪತ್ನಿಯನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದಿದ್ದ. ಈ ವೇಳೆ ವೈದ್ಯರು ಆಕೆಯ ಮೈ ಮುಟ್ಟಿ ತಪಾಸಣೆ ನಡೆಸಿದ್ದು, ಇದರಿಂದ ಆಕ್ರೋಶಗೊಂಡ ಆರೋಪಿ ಅವರ ಕಾಲರ್ ಹಿಡಿದು ಕಪಾಳಮೋಕ್ಷ ಮಾಡಿದ್ದ.
ಹೀಗಾಗಿ ಆತನ ವಿರುದ್ಧ ಕೇಸ್ ದಾಖಲಾಗಿದ್ದು, ನ್ಯಾಯಾಲಯದಿಂದ ನಿರೀಕ್ಷಣಾ ಜಾಮೀನು ಕೋರಿದ್ದ. ಅಲ್ಲದೆ ವೈದ್ಯರ ವಿರುದ್ಧ ಅಸಭ್ಯ ವರ್ತನೆ ತೋರಿದ ದೂರನ್ನೂ ಸಹ ದಾಖಲಿಸಲಾಗಿತ್ತು. ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ವಿರುದ್ಧ ಹಲ್ಲೆಯ ದೂರು ದಾಖಲಾದ ಬಳಿಕ ವೈದ್ಯರ ವಿರುದ್ಧ ಅಸಭ್ಯ ವರ್ತನೆಯ ಪ್ರತಿ ದೂರು ನೀಡಿರುವುದನ್ನು ಗಮನಿಸಿದೆ.
ಅಲ್ಲದೆ ವೈದ್ಯರು ತಪಾಸಣೆ ನಡೆಸಿದ್ದು, ತೆರೆದ ಪ್ರದೇಶದಲ್ಲಿ ಎಂಬುದನ್ನೂ ಸಹ ನ್ಯಾಯಾಲಯ ಪರಿಗಣಿಸಿದೆ. ಈ ವೇಳೆ ಇಬ್ಬರು ದಾದಿಯರು ಸಹ ಸ್ಥಳದಲ್ಲಿ ಇದ್ದದ್ದನ್ನು ನ್ಯಾಯಾಲಯದ ಗಮನಕ್ಕೆ ತರಲಾಗಿತ್ತು. ಈ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಲಾಗಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್ ವಜಾಗೊಳಿಸಿದೆ.