
ಬೆಂಗಳೂರು: ಪಿಎಸ್ಐ ಹುದ್ದೆ ಕೊಡಿಸುವುದಾಗಿ ವ್ಯಕ್ತಿಯೊಬ್ಬರಿಂದ 45 ಲಕ್ಷ ರೂಪಾಯಿ ಪಡೆದು ವಂಚಿಸಿದ ಆರೋಪದ ಮೇರೆಗೆ ವೈದ್ಯ, ಕೆಲಸದಿಂದ ವಜಾಗೊಂಡ ಪಿಡಿಒ ಅವರನ್ನು ದಾಬಸ್ ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ.
ನೆಲಮಂಗಲ ತಾಲೂಕಿನ ಬಿಲ್ಲನಕೋಟೆಯ ನಿವಾಸಿ ಬಿ.ಎಸ್. ಅನಿಲ್ ಕುಮಾರ್ ಅವರ ದೂರು ನೀಡಿದ್ದು, ಆರೋಗ್ಯ ಭಾರತಿ ಆಸ್ಪತ್ರೆಯ ವೈದ್ಯ ಡಾ. ಚಂದ್ರಶೇಖರ್ ಅವರ ಸ್ನೇಹಿತ ಮಾಚನಹಳ್ಳಿ ಗ್ರಾಮದ ಯೋಗೇಂದ್ರ ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಅನಾರೋಗ್ಯದ ಕಾರಣ ಆರೋಗ್ಯ ಭಾರತಿ ಆಸ್ಪತ್ರೆಗೆ ಭೇಟಿ ನೀಡಿದ್ದ ವೇಳೆ ಡಾ. ಚಂದ್ರಶೇಖರ್ ಪರಿಚಯವಾಗಿದ್ದು, ಯಾರಿಗಾದರೂ ಸರ್ಕಾರಿ ಕೆಲಸ ಬೇಕಿದ್ದಲ್ಲಿ ಕೊಡಿಸುವುದಾಗಿ ತಿಳಿಸಿದ್ದಾರೆ. ಅನೇಕರಿಗೆ ಕೆಲಸ ಕೊಡಿಸಿರುವುದಾಗಿ ನಕಲಿ ನೇಮಕಾತಿ ಆದೇಶ ಪ್ರತಿಗಳನ್ನು ತೋರಿಸಿದ್ದಾರೆ. ತಮ್ಮ ಪತ್ನಿಯ ತಮ್ಮ ಪಿಎಸ್ಐ ಪರೀಕ್ಷೆ ಬರೆದಿರುವುದನ್ನು ತಿಳಿಸಿದಾಗ ಸರ್ಕಾರದ ಉನ್ನತ ಹುದ್ದೆಯಲ್ಲಿರುವ ಸ್ನೇಹಿತ ಯೋಗೇಂದ್ರ ಮೂಲಕ ಕೆಲಸ ಕೊಡಿಸುತ್ತೇನೆ. 45 ಲಕ್ಷ ರೂಪಾಯಿ ನೀಡಬೇಕೆಂದು ಹೇಳಿದ್ದಾರೆ. 2021ರ ಅಕ್ಟೋಬರ್ 17ರಂದು ಆರೋಪಿಗಳಾದ ಡಾ. ಚಂದ್ರಶೇಖರ್ ಮತ್ತು ಯೋಗೇಂದ್ರ ಹೋಟೆಲ್ ವೊಂದಕ್ಕೆ ಕರೆಸಿಕೊಂಡು ಪಿಎಸ್ಐ ಹುದ್ದೆ ಕೊಡಿಸುವ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ತಿಳಿಸಿ ವಿವಿಧ ಬ್ಯಾಂಕ್ ಖಾತೆಗಳಿಗೆ 45 ಲಕ್ಷ ರೂಪಾಯಿಯನ್ನು ವರ್ಗಾವಣೆ ಮಾಡಿಸಿಕೊಂಡಿದ್ದಾರೆ.
ಕೆಲ ದಿನಗಳ ನಂತರ ಬಾಮೈದನಿಗೆ ಪಿಎಸ್ಐ ಹುದ್ದೆಯ ನೇಮಕಾತಿ ಆಗಿರುವುದಾಗಿ ತಾತ್ಕಾಲಿಕ ಆಯ್ಕೆ ಪಟ್ಟಿ ತೋರಿಸಿದ್ದಾರೆ. ಆದರೆ ನೇಮಕಾತಿ ಬಗ್ಗೆ ಯಾವುದೇ ಬೆಳವಣಿಗೆ ಇಲ್ಲದ ಕಾರಣ ಅನುಮಾನಗೊಂಡು ಪ್ರಶ್ನಿಸಿದಾಗ ಸರಿಯಾದ ಉತ್ತರ ನೀಡಿಲ್ಲ. ಹಣ ವಾಪಸ್ ಕೇಳಿದಾಗ 15 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಉಳಿದ ಹಣ ಕೇಳಿದಾಗ ಜಾತಿ ನಿಂದನೆ ಪ್ರಕರಣ ದಾಖಲಿಸಿ ಜೈಲಿಗೆ ಕಳಿಸುವುದಾಗಿ ಬೆದರಿಸಿ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಯೋಗೇಂದ್ರ ವಿರುದ್ಧ ಚೆನ್ನಮ್ಮನ ಅಚ್ಚುಕಟ್ಟು ಪೊಲೀಸ್ ಠಾಣೆ, ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆ, ಹಿರಿಯೂರು ಚಿತ್ರದುರ್ಗ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಯಾಲ್ಲಾಪುರ ಪಿಡಿಒ ಆಗಿದ್ದ ಯೋಗೇಂದ್ರ ಅವರನ್ನು ಕೆಲಸದಿಂದ ವಜಾ ಮಾಡಲಾಗಿದ್ದು, ಒಂದೂವರೆ ವರ್ಷದಿಂದ ದುಬೈನಲ್ಲಿ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಇತ್ತೀಚೆಗೆ ಬೆಂಗಳೂರು ಏರ್ಪೋರ್ಟ್ ನಲ್ಲಿ ಸಿಕೆ ಅಚ್ಚುಕಟ್ಟು ಠಾಣೆ ಪೋಲೀಸರು ಬಂಧಿಸಿದ್ದರು. ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ.