ಕೆಲ ಮಾಲೀಕರು ತಮ್ಮ ವಾಹನ ಎಲ್ಲರ ಕಣ್ಣು ಕುಕ್ಕಲೆಂಬ ಕಾರಣಕ್ಕೆ ಪ್ರಖರ ಬೆಳಕನ್ನು ಹೊರ ಸೂಸುವ ಹೆಡ್ ಲೈಟ್ ಬಳಸುತ್ತಾರೆ. ಇದರಿಂದ ಎದುರಿಗೆ ಬರುವ ವಾಹನ ಸವಾರರಿಗೆ ಅಡಚಣೆಯಾಗುತ್ತದೆ ಎಂಬುದು ತಿಳಿದಿದ್ದರೂ ಸಹ ಲೆಕ್ಕಿಸುವುದಿಲ್ಲ. ಅಂತವರಿಗೆ ಮಹತ್ವದ ಮಾಹಿತಿಯೊಂದು ಇಲ್ಲಿದೆ.
ನಿಮ್ಮ ವಾಹನದ ಹೆಡ್ ಲೈಟ್ 1989ರ ಕೇಂದ್ರ ಮೋಟಾರ್ ವಾಹನ ಕಾಯ್ದೆಯಲ್ಲಿ ಒತ್ತುಪಡಿಸಿರುವ ಮಾನದಂಡಗಳಿಗೆ ಅನುಗುಣವಾಗಿ ಇರಬೇಕಿದ್ದು, ಇದಕ್ಕಿಂತ ಹೆಚ್ಚು ಹೆಡ್ ಲೈಟ್ ಅಳವಡಿಸುವುದು, ಮಾರ್ಪಡಿಸುವುದು, ಎಲ್ಇಡಿ ಲೈಟ್ ಅಳವಡಿಸುವುದು ಅಥವಾ ಪ್ರಖರ ಬೆಳಕನ್ನು ಸೂಸುವ ಲೈಟ್ ಅಳವಡಿಸುವಂತಿಲ್ಲ.
ಅಲ್ಲದೆ ಕಂಪನಿಯವರು ನಿಗದಿಪಡಿಸಿದ ಹೆಡ್ ಲೈಟ್ ಮಾತ್ರ ವಾಹನದಲ್ಲಿ ಅಳವಡಿಸಬಹುದಾಗಿದ್ದು, ದ್ವಿಚಕ್ರ ವಾಹನ ಹಾಗೂ ಆಟೋರಿಕ್ಷಾ ಒಂದು ಅಥವಾ ಎರಡು ಹೆಡ್ ಲೈಟ್ ಮಾತ್ರ ಹೊಂದಿರಬೇಕಿದೆ. 4 ಅದಕ್ಕಿಂತ ಹೆಚ್ಚು ಚಕ್ರಗಳಿರುವ ವಾಹನಗಳು ಎರಡು ಅಥವಾ ನಾಲ್ಕು ಹೆಡ್ ಲೈಟ್ ಮಾತ್ರ ಹೊಂದಿರಬೇಕು. ಈ ಲೈಟ್ ಗಳು ಹೊರ ಸೂಸುವ ಬೆಳಕು ಶಾಶ್ವತವಾಗಿ ಕೆಳ ಮುಖವಾಗಿರಬೇಕಿದ್ದು, ನಿಯಮ ಮೀರಿ ಕಣ್ಣು ಕುಕ್ಕುವ ಹೆಡ್ ಲೈಟ್ ಗಳನ್ನು ಯಾವುದೇ ಕಾರಣಕ್ಕೂ ಅಳವಡಿಸುವಂತಿಲ್ಲ.
ವಾಹನದಿಂದ ಹೊರ ಸೂಸುವ ಹೆಡ್ ಲೈಟ್ ಬೆಳಕು ಎಂಟು ಮೀಟರ್ ದೂರದಲ್ಲಿರುವ ಮತ್ತೊಂದು ವಾಹನದ ಚಾಲಕನ ಕಣ್ಣು ಕುಕ್ಕುವಂತಿರಬಾರದು. ಅಲ್ಲದೆ ಬಲಭಾಗದಲ್ಲಿ ಅಳವಡಿಸಿರುವ ಹೆಡ್ ಲೈಟ್ ಬಲಕ್ಕೆ 0.5 ಮೀಟರ್ ದೂರದಲ್ಲಿ ಕುಳಿತಿರುವ ಎದುರಿನ ವಾಹನದಲ್ಲಿನ ವ್ಯಕ್ತಿಯ ಕಣ್ಣು ಕುಕ್ಕಬಾರದು. ಈ ನಿಯಮಗಳನ್ನು ಮೀರಿದರೆ ಅಂತಹ ವಾಹನಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಕಮಿಷನರ್ ಅನುಪಮ್ ಅಗರ್ವಾಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ