ಎರಡು ಕುಟುಂಬಗಳನ್ನು, ಎರಡು ಜೀವಗಳನ್ನು ಬೆಸೆಯುವುದೇ ಮದುವೆ. ಎಲ್ಲರ ಜೀವನದಲ್ಲೂ ಮದುವೆ ಅನ್ನೋದು ಒಂದು ಸುಂದರ ಕನಸು. ಮದುವೆಯಲ್ಲಿ ನಾನಾ ಶಾಸ್ತ್ರಗಳು ಆಚರಣೆಯಲ್ಲಿ ಇದೆ. ಸಂಪ್ರದಾಯ ಹಾಗೂ ಪರಂಪರೆಯ ಅನುಸಾರ ಮದುವೆ ಶಾಸ್ತ್ರದಲ್ಲಿ ಅಲ್ಪ ಸ್ವಲ್ಪ ಬದಲಾವಣೆ ಇದ್ದೇ ಇರುತ್ತದೆ. ಆದರೆ ಸಾಮಾನ್ಯವಾಗಿ ಎಲ್ಲರ ಮದುವೆ ಸಂಪ್ರದಾಯದಲ್ಲೂ ಹಸೆಮಣೆಗೆ ಹೆಣ್ಣನ್ನು ಕರೆತಂದಾಗ ಅಂತರಪಟ ಹಿಡಿಯುವುದು ವಾಡಿಕೆ. ಅಂತರಪಟ ಸರಿದ ಮೇಲೆಯೇ ಜೀರಿಗೆ ಬೆಲ್ಲ ತಲೆಯ ಮೇಲೆ ಸುರಿದು, ಹಾರ ಬದಲಾಯಿಸಿ, ತಾಳಿ ಕಟ್ಟುವುದು.
ಅಂತರಪಟಕ್ಕೆ ಒಂದು ಹಿನ್ನೆಲೆ ಇದೆ. ಬಹಳ ಹಿಂದೆ ಮದುವೆಯನ್ನು ಹಿರಿಯರೇ ನಿಶ್ಚಯಿಸುತ್ತಿದ್ದರು. ಯಾವ ಹೆಣ್ಣಿಗೆ ಯಾವ ಗಂಡು ಅಂತ ಮನೆಯವರೇ ನಿರ್ಧಾರ ಮಾಡುತ್ತಿದ್ದರು. ಮದುವೆಯ ದಿನಾಂಕ, ಮದುವೆಯ ಸ್ಥಳ ಎಲ್ಲವೂ ಹಿರಿಯರ ನಿರ್ಧಾರವೇ ಅಂತಿಮ.
ಮದುವೆಯ ದಿನವಷ್ಟೇ ಹೆಣ್ಣು – ಗಂಡು ಪರಸ್ಪರ ಒಬ್ಬರ ಮುಖ ಒಬ್ಬರು ನೋಡಲು ಅವಕಾಶ ಇದ್ದದ್ದು. ಇಬ್ಬರಲ್ಲೂ ತನ್ನ ಸಂಗಾತಿ ಹೇಗಿರಬಹುದು ಎಂಬ ಕುತೂಹಲ ಸಹಜವಾಗಿ ಮನೆ ಮಾಡಿರುತ್ತಿತ್ತು. ಗಂಡು, ಹೆಣ್ಣಿನ ಮೊದಲ ಭೇಟಿಯ ಕುತೂಹಲಕ್ಕೆ ತೆರೆ ಸರಿಯುವ ಅರ್ಥದಲ್ಲಿ ಅಂತರಪಟ ಇರುತ್ತಿತ್ತು.
ಆದರೆ ಈಗ ತಮ್ಮ ಸಂಗಾತಿಯನ್ನು ತಾವೇ ಆಯ್ಕೆ ಮಾಡಿಕೊಳ್ಳುವ ಕಾಲ. ಮನೆಯವರೇ ನಿಶ್ಚಯ ಮಾಡಿದ ಮದುವೆ ಆದರೂ ಮದುವೆಯ ಮೊದಲೇ ಗಂಡು – ಹೆಣ್ಣು ಮುಕ್ತವಾಗಿ ಮಾತನಾಡಲು, ಭೇಟಿ ಮಾಡಲು ಯಾವ ನಿರ್ಬಂಧವೂ ಈಗ ಇಲ್ಲ. ಆದರೂ ಅಂತರಪಟದ ಅಗತ್ಯ ಏನಿದೆ? ಇನ್ನೂ ಯಾಕೆ ಈ ಶಾಸ್ತ್ರ ಅಸ್ತಿತ್ವದಲ್ಲಿ ಇದೆ? ಎಂಬ ಪ್ರಶ್ನೆ ಕಾಡುವುದು ಸಹಜ.
ಮದುವೆಗೆ ಮೊದಲು ಎಷ್ಟೇ ಬಾರಿ ನೋಡಿದರೂ, ಮದುವೆ ಮಂಟಪದಲ್ಲಿ ವಧು, ವರರ ಅಲಂಕಾರದಲ್ಲಿ ಸಿಂಗಾರಗೊಂಡ ಇಬ್ಬರೂ ಪರಸ್ಪರ ಹೇಗೆ ಕಾಣಬಹುದು ಎಂಬ ಕುತೂಹಲ ಈಗಲೂ ಹಾಗೇ ಇದೆ. ಮದುವೆ ಮನೆಯಲ್ಲಿ ಎಲ್ಲರ ಚಿತ್ತ ಈಗಲೂ ನವ ವಿವಾಹಿತರ ಕಡೆಗೆ ತಾನೇ? ಹಾಗಾಗಿ ಇಂತಹ ಶಾಸ್ತ್ರಗಳು ಎಷ್ಟೇ ಹಳೆಯದಾದರೂ ಇನ್ನೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ.