ಹಿಂದೂ ಧರ್ಮದಲ್ಲಿ ಶ್ರಾದ್ಧ ಕ್ರಿಯೆಗೆ ಬಹಳ ಮಹತ್ವ ಇದೆ. ನಮ್ಮ ಅಸ್ತಿತ್ವಕ್ಕೆ, ಏಳಿಗೆಗೆ ಕಾರಣರಾದ ಹಿರಿಯರನ್ನು ಸ್ಮರಿಸುವ, ಗೌರವಿಸುವ ಕ್ರಿಯೆಯೇ ಶ್ರಾದ್ಧ. ಅಗಲಿದ ಪಿತೃಗಳ ಆತ್ಮ ಮುಕ್ತಿ ಹೊಂದಲಿ, ಶಾಂತಿ ಸದ್ಗತಿ ಸಿಗಲಿ ಎಂಬುದು ಇದರ ಹಿಂದಿನ ಉದ್ದೇಶ.
ಪಿತೃ ಕ್ರಿಯೆಗಳನ್ನು ಸರಿಯಾಗಿ ನೆರವೇರಿಸದವರಿಗೆ ವಿವಾಹ, ಸಂತಾನದ ಕೊರತೆ ಕಾಡುತ್ತದೆ. ಹಿಂದೂ ಧರ್ಮದ ಹಲವಾರು ಜಾತಿ, ಪಂಗಡಗಳಲ್ಲಿ ತಮ್ಮದೇ ವಿಧಿ ವಿಧಾನದ ಮೂಲಕ ಅಗಲಿದ ಪಿತೃಗಳ ಪೂಜೆ ನೆರವೇರಿಸುತ್ತಾರೆ. ಯಾವುದೇ ವಿಧಾನವಾದರೂ ಸರಿಯೇ, ಪಿತೃಗಳ ಸ್ಮರಣೆ ಇಲ್ಲಿ ಮುಖ್ಯ.
ಇನ್ನೂ ಗಯಾ ಕ್ಷೇತ್ರ ಶ್ರಾದ್ಧ ಕ್ರಿಯೆಗೆ ಶ್ರೇಷ್ಟವಾದ ಜಾಗ ಎಂಬ ಮಾತಿದೆ. ಗಯಾ ಕೇವಲ ಹಿಂದುಗಳಿಗಷ್ಟೇ ಅಲ್ಲ ಬೌದ್ಧರಿಗೂ ಪವಿತ್ರ ಸ್ಥಳ. ಗಯಾ ಕ್ಷೇತ್ರ ಯಾಕೆ ಅಷ್ಟೊಂದು ವಿಶೇಷ ಅಂದರೆ, ಇಲ್ಲಿ ಸಾಕ್ಷಾತ್ ಮಹಾ ವಿಷ್ಣುವೇ ಪಾದ ಊರಿದ್ದಾನೆ ಎಂಬ ಪ್ರತೀತಿ ಇದೆ. ಇಲ್ಲಿ ಅಗಲಿದ ಪಿತೃಗಳಿಗೆ ಒಮ್ಮೆ ಪಿಂಡ ಪ್ರದಾನ ಮಾಡಿ, ತರ್ಪಣ ಬಿಟ್ಟರೆ ಮುಕ್ತಿ ದೊರೆತ ಹಾಗೆ. ನೂರು ಶ್ರಾದ್ಧ ಮಾಡಿದಷ್ಟು ಪುಣ್ಯ ಫಲ ಸಿಗುತ್ತದೆ.
ಅಕಾಲಿಕ ಮರಣ ಹೊಂದಿದ ಅಂದರೆ ಅಪಘಾತ, ಆತ್ಮಹತ್ಯೆ, ಕೊಲೆ ಅಥವಾ ಆಕಸ್ಮಿಕ ಸಾವು ಉಂಟಾದ ಸಂದರ್ಭದಲ್ಲಿ ಗಯಾ ಕ್ಷೇತ್ರದಲ್ಲಿ ಪಿಂಡ ಪ್ರಧಾನ ಮಾಡಲೇ ಬೇಕು. ಏಕೆಂದರೆ ಅಕಾಲಿಕ ಮರಣ ಹೊಂದಿದ ಯಾರೇ ಆಗಲಿ, ಅವರ ಆತ್ಮ ತಾವು ಇನ್ನೂ ಭೂಮಿಯಲ್ಲಿ ಬದುಕಿರಬೇಕಿತ್ತು ಎಂದು ಪರಿತಾಪ ಪಡುತ್ತಿರುತ್ತದೆ. ಇಂತಹ ಪರಿತಾಪಕ್ಕೆ ಮುಕ್ತಿ ಸಿಗುವ ಏಕೈಕ ಜಾಗ ಅಂದರೆ ಅದೇ ವಿಷ್ಣುವಿನ ಅನುಗ್ರಹ ಇರುವ ಗಯಾ ಕ್ಷೇತ್ರ.