ಪ್ರತಿ ತಿಂಗಳೂ ಬರುವ ಋತುಸ್ರಾವ ಮಹಿಳೆಯರನ್ನು ಕಾಡುತ್ತಲೇ ಇರುತ್ತದೆ. ನೋವು, ಬಯಕೆಗಳು, ಹೊಟ್ಟೆ ತೊಳೆಸುವಿಕೆ ಇವೆಲ್ಲವೂ ಮುಟ್ಟಿನ ದಿನಗಳಲ್ಲಿ ಸಾಮಾನ್ಯ. ಚಳಿಗಾಲದಲ್ಲಿ ಈ ಸಮಸ್ಯೆಗಳೆಲ್ಲ ಇನ್ನಷ್ಟು ಹೆಚ್ಚಾಗುತ್ತವೆ. ಅದಕ್ಕೂ ಕಾರಣವಿದೆ.
ಮುಟ್ಟಿನ ದಿನಗಳು ಸಮೀಪಿಸಿದಾಗ ಕಾಡುವ ಬೇಸರ, ಖಿನ್ನತೆ, ಟೆನ್ಷನ್ ಎಲ್ಲವೂ ಚಳಿಗಾಲದಲ್ಲಿ ಜಾಸ್ತಿಯಾಗುತ್ತವೆ. ಚಳಿಗಾಲದಲ್ಲಿ ಹಗಲು ಕಡಿಮೆ, ರಾತ್ರಿ ಜಾಸ್ತಿ. ಒಂದು ರೀತಿಯ ತಣ್ಣನೆಯ ವಾತಾವರಣವಿರುವುದರಿಂದ ನಿಮ್ಮ ಮೂಡ್ ನಂತೆ ಹಾರ್ಮೋನ್ ಗಳಲ್ಲೂ ಬದಲಾವಣೆ ಆಗುತ್ತದೆ.
ಸೂರ್ಯನ ಬೆಳಕಿನಿಂದ ನಮಗೆ ವಿಟಮಿನ್ ಡಿ ಸಿಗುತ್ತದೆ. ಅದರ ಜೊತೆಗೆ ಒಳ್ಳೆಯ ಮೂಡ್ ಗೂ ಇದು ಪ್ರೇರಣೆ. ಸಂತೋಷ, ಏಕಾಗ್ರತೆಗೂ ಮೂಲ ಸೂರ್ಯನ ಬೆಳಕು. ಚಳಿಗಾಲದಲ್ಲಿ ನಾವು ಮನೆಯಲ್ಲೇ ಹೆಚ್ಚು ಕುಳಿತಿರುತ್ತೇವೆ, ಹೆಚ್ಚು ಚಲನವಲನ ಇರುವುದಿಲ್ಲ, ಆದ್ರೆ ಜಾಸ್ತಿ ಆಹಾರ ಸೇವಿಸುತ್ತೇವೆ.
ಇದು ಋತುಸ್ರಾವದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರು ಹೆಚ್ಚು ಚಟುವಟಿಕೆಯಿಂದಿದ್ದಲ್ಲಿ ಋತುಸ್ರಾವದಲ್ಲಿ ಕಂಡುಬರುವ ಸಮಸ್ಯೆಗಳೆಲ್ಲ ಕಡಿಮೆಯಾಗುತ್ತವೆ. ಹಾಗಾಗಿ ಚಳಿಗಾಲದಲ್ಲಿ ಮಹಿಳೆಯರು ಬ್ಯುಸಿಯಾಗಿರುವುದು ಉತ್ತಮ ಎನ್ನುತ್ತಾರೆ ವೈದ್ಯರು.