ಆಹಾರಕ್ಕೆ ಹೆಚ್ಚು ಬ್ಯಾಕ್ಟೀರಿಯಾಗಳು ಮುತ್ತಿಗೆ ಹಾಕಬಾರದು ಎಂಬ ಕಾಳಜಿ ನಿಮಗಿದ್ದರೆ ಆಗಾಗ್ಗೆ ಫ್ರಿಡ್ಜ್ ಕ್ಲೀನ್ ಮಾಡುತ್ತಿರುವುದು ಬಹಳ ಮುಖ್ಯ.
ನೀವು ನಿತ್ಯ ತರಕಾರಿ ಇಡುವುದು ತೆಗೆಯುವುದು ಮಾಡುತ್ತಿದ್ದರೆ ಹದಿನೈದು ದಿನಕ್ಕೊಮ್ಮೆ ಫ್ರಿಡ್ಜ್ ಶುಚಿಗೊಳಿಸಬೇಕು. ವಾರಕ್ಕೊಮ್ಮೆ ತರಕಾರಿ ಇಡುವವರಾದರೆ ತಿಂಗಳಿಗೊಮ್ಮೆ ಒರೆಸಿದರೆ ಸಾಕು. ಅಪರೂಪಕ್ಕೆ ಫ್ರಿಡ್ಜ್ ಬಳಸುವವರಾದರೆ ಎರಡು ತಿಂಗಳಿಗೊಮ್ಮೆ ತೊಳೆಯಲು ಮರೆಯದಿರಿ.
ಕ್ಲೀನ್ ಮಾಡುವುದು ಹೇಗೆ? ಮೊದಲು ಫ್ರಿಡ್ಜ್ ನಲ್ಲಿರುವ ಎಲ್ಲಾ ಸಾಮಾಗ್ರಿಗಳನ್ನು ಹೊರತೆಗೆಯಿರಿ. ಶೆಲ್ಫ್ ಗಳನ್ನು ತೆಗೆಯಿರಿ. ಬಳಿಕ ಇವುಗಳನ್ನು ಬಿಸಿನೀರು ಹಾಗೂ ಸೋಪು ಹಾಕಿ ತೊಳೆಯಿರಿ. ಒಳಭಾಗವನ್ನೂ ಇದೇ ವಿಧಾನದಲ್ಲಿ ಸ್ವಚ್ಛಗೊಳಿಸಿ.
ಫ್ರಿಡ್ಜ್ ತೊಳೆಯುವ ಮುನ್ನ ಸ್ವಿಚ್ ಆಫ್ ಮಾಡಲು ಮರೆಯದಿರಿ. ತೊಳೆದ ಬಳಿಕ ಒಣ ಬಟ್ಟೆಯಿಂದ ಒರೆಸಿ. ಹೆಚ್ಚುವರಿ ನೀರನ್ನು ತೆಗೆದುಹಾಕಿ. ಕೆಟ್ಟ ಅಥವಾ ಅವಧಿ ಮುಗಿದ ಸಾಮಾಗ್ರಿಗಳನ್ನು ಹೊರಗೆಸೆಯಿರಿ. ಆಯಾ ವಾತಾವರಣಕ್ಕೆ ಹೊಂದಿಕೊಳ್ಳುವಂತೆ ತಾಪಮಾನ ಸೆಟ್ ಮಾಡಿ.
ಫ್ರಿಡ್ಜ್ ನ ಸಾಮರ್ಥ್ಯಕ್ಕೂ ಮೀರಿದ ವಸ್ತುಗಳನ್ನು ಅದರಲ್ಲಿ ತುಂಬಿಡುವುದು ಕೂಡಾ ಒಳ್ಳೆಯದಲ್ಲ. ಅಲ್ಲಿ ಗಾಳಿಯಾಡಲು ಜಾಗವಿರಲಿ. ಫ್ರೀಜರ್ ಬಾಗಿಲನ್ನು ಪದೇ ಪದೇ ಹಾಕಿ ತೆಗೆಯುವ ತಪ್ಪನ್ನು ಮಾಡದಿರಿ.