
ಮಗು ಹುಟ್ಟುವ ಸೂಚನೆ ಸಿಕ್ಕ ಕೂಡಲೇ ಹೆಣ್ಣಾದರೆ ಈ ಹೆಸರು, ಗಂಡಾದರೆ ಈ ಹೆಸರು ಇಡಬೇಕು ಎಂದು ಹುಡುಕಾಟ ಶುರು ಮಾಡುವುದು ಸಾಮಾನ್ಯ. ಇತ್ತೀಚೆಗಂತೂ ತಮ್ಮ ಮಗುವಿನ ಹೆಸರು ವಿಭಿನ್ನವಾಗಿ ಇರಬೇಕು ಎಂದು ಬಹಳ ಸಂಶೋಧನೆ ಮಾಡಿ ಹುಡುಕುವುದು ಉಂಟು.
ಈ ಹಿಂದೆ ಹೆಚ್ಚಾಗಿ ಹೆಣ್ಣೇ ಹುಟ್ಟಲಿ, ಗಂಡೇ ಹುಟ್ಟಲಿ ದೇವರ ಹೆಸರನ್ನೇ ಇಡುವುದು ಸಾಮಾನ್ಯವಾಗಿತ್ತು. ಅದರಲ್ಲೂ ಮನೆ ದೇವರ ಹೆಸರನ್ನು ಇಡುವುದು ಎಲ್ಲರ ಮನೆಯಲ್ಲೂ ವಾಡಿಕೆ. ಆದರೆ ಯಾಕೆ ಹೀಗೆ ಗೊತ್ತಾ?
ಮಕ್ಕಳು ಪಾದರಸದ ಹಾಗೆ. ಒಂದೆಡೆ, ಒಂದು ಕ್ಷಣ ಸುಮ್ಮನೆ ಕೂರುವವರಲ್ಲ. ಒಂದಲ್ಲ ಒಂದು ಕಾರಣಕ್ಕೆ ಪೋಷಕರು, ಸಂಬಂಧಿಕರು ಸೇರಿದ ಹಾಗೆ ಪ್ರತಿಯೊಬ್ಬರೂ ಮಗುವಿನ ಹೆಸರನ್ನು ಕೂಗುವುದರ ಮೂಲಕ ದೇವರ ನಾಮಸ್ಮರಣೆ ಮಾಡಿದ ಹಾಗೂ ಆಗುತ್ತದೆ ಎಂಬ ಸದುದ್ದೇಶ ಇದರ ಹಿಂದೆ ಇದೆ. ಇದಕ್ಕೆ ಪುಷ್ಟಿ ಕೊಡುವ ಹಾಗೆ ಪುರಾಣದಲ್ಲಿ ಒಂದು ಕಥೆಯೂ ಇದೆ. ಅಜಮಿಳ ಎಂಬ ಕೆಟ್ಟ ವ್ಯಕ್ತಿ, ಅವನ ಕೊನೆಗಾಲದಲ್ಲಿ ತನ್ನ ಕಿರಿಯ ಮಗ ನಾರಾಯಣನ ಹೆಸರು ಕೂಗಿದ ಮಾತ್ರಕ್ಕೆ ಅವನ ಪಾಪಗಳನ್ನು ಮನ್ನಿಸಿ, ಮೋಕ್ಷಕ್ಕೆ ಪಾತ್ರನಾದ ಕಥೆ ಹೆಚ್ಚು ಜನಜನಿತ.
ದೇವರ ಹೆಸರನ್ನು ಪ್ರತಿ ಸಂದರ್ಭದಲ್ಲೂ ಕರೆಯುವುದರಿಂದ ನಮ್ಮ ಕಷ್ಟಗಳು ಕಳೆದು, ತಪ್ಪಿನ ಪ್ರಾಯಶ್ಚಿತವೂ ಆಗುತ್ತದೆ ಎಂಬ ಉದ್ದೇಶ ಇದರ ಹಿಂದಿದೆ.