ಆನ್‌ಲೈನ್ ಫುಡ್ ಡೆಲಿವರಿ ಕಂಪನಿ ಝೊಮೆಟೋ ಸಂಸ್ಥಾಪಕ ಮತ್ತು ಸಿಇಓ ದೀಪಿಂದರ್ ಗೋಯಲ್ ಅವರು ಮೆಕ್ಸಿಕನ್ ಮೂಲದ ರೂಪದರ್ಶಿಯನ್ನು ಮದುವೆಯಾಗಿದ್ದಾರೆ. ಇದೊಂದು ರಹಸ್ಯ ವಿವಾಹ, ರೂಪದರ್ಶಿಯಾಗಿದ್ದ ಗ್ರೇಸಿಯಾ ಮುನೋಜ್ ಸದ್ಯ ಉದ್ಯಮ ಕ್ಷೇತ್ರಕ್ಕೂ ಕಾಲಿಟ್ಟಿದ್ದಾಳೆ.
ಇತ್ತೀಚೆಗಷ್ಟೇ ಝೊಮೆಟೋನಲ್ಲಿ ‘ಕೇವಲ ಸಸ್ಯಾಹಾರಿ’ ಆಹಾರದ ಸೌಲಭ್ಯವನ್ನು ಪ್ರಾರಂಭಿಸಿ ದೀಪಿಂದರ್ ಗೋಯಲ್ ಗಮನ ಸೆಳೆದಿದ್ದರು. ಗೋಯಲ್‌ಗೆ ಇದು ಎರಡನೇ ಮದುವೆ. 41 ವರ್ಷದ ದೀಪಿಂದರ್ ಈ ಮೊದಲು ಕಾಂಚನ್ ಜೋಶಿ ಅವರನ್ನು ಮದುವೆಯಾಗಿದ್ದರು.
ದೀಪಿಂದರ್ ಅವರನ್ನು ವರಿಸಿರುವ ಗ್ರೇಸಿಯಾ, ಭಾರತದಲ್ಲಿ ಐಷಾರಾಮಿ ಗ್ರಾಹಕ ಉತ್ಪನ್ನ ವಲಯದಲ್ಲಿ ತನ್ನದೇ ಆದ ಸ್ಟಾರ್ಟಪ್ ಅನ್ನು ನಡೆಸುತ್ತಿದ್ದಾರೆ. ಈ ಹಿಂದೆ ಆಕೆ ಮಾಡೆಲಿಂಗ್ ಮಾಡುತ್ತಿದ್ದರು. ಈಕೆ ಮೆಟ್ರೋಪಾಲಿಟನ್ ಫ್ಯಾಶನ್ ವೀಕ್ 2022ರ ವಿಜೇತೆ.
ದೀಪಿಂದರ್ ಹಾಗೂ ಗ್ರೇಸಿಯಾ ಎರಡು ತಿಂಗಳ ಹಿಂದೆ ಮದುವೆಯಾಗಿದ್ದಾರೆ. ಫೆಬ್ರವರಿಯಲ್ಲಿ ದಂಪತಿ ಹನಿಮೂನ್‌ನಿಂದ ಹಿಂತಿರುಗಿದ್ದರು. ಆದರೆ ದೀಪಿಂದರ್ ಗೋಯಲ್ ತಮ್ಮ ಮೊದಲ ಪತ್ನಿಯಿಂದ ಯಾವಾಗ ವಿಚ್ಛೇದನ ಪಡೆದರು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.
ಗುರ್‌ಗಾಂವ್‌ನ ನಿವಾಸಿಯಾಗಿರುವ 41 ವರ್ಷದ ದೀಪಿಂದರ್ ಗೋಯಲ್, 2008 ರಲ್ಲಿ ಕನ್ಸಲ್ಟಿಂಗ್ ಫರ್ಮ್ ಬೈನ್ ಆಂಡ್ ಕಂಪನಿಯಲ್ಲಿ ಕೆಲಸವನ್ನು ತೊರೆದ ನಂತರ ರೆಸ್ಟೋರೆಂಟ್ ಅಗ್ರಿಗೇಟರ್ ಮತ್ತು ಫುಡ್ ಡೆಲಿವರಿ ಕಂಪನಿ ಝೊಮೆಟೋವನ್ನು ಪ್ರಾರಂಭಿಸಿದರು. ಆರಂಭದಲ್ಲಿ ಇದನ್ನು Foodiebay.com ಎಂದು ಕರೆಯಲಾಗುತ್ತಿತ್ತು.
ದೀಪಿಂದರ್ ಗೋಯಲ್ ಝೊಮ್ಯಾಟೋ ಕಂಪನಿಯ ವ್ಯವಹಾರವು ಪ್ರಪಂಚದಾದ್ಯಂತ ಹರಡಿದೆ. ಕಂಪನಿಯ ಪ್ರಸ್ತುತ ಮೌಲ್ಯ ಸುಮಾರು 1.5 ಲಕ್ಷ ಕೋಟಿ ರೂಪಾಯಿ. ದೇಶದ ಶ್ರೀಮಂತರ ಪಟ್ಟಿಯಲ್ಲಿ ದೀಪಿಂದರ್ ಹೆಸರು ಸೇರಿದೆ. ಅವರ ನಿವ್ವಳ ಆಸ್ತಿಯ ಮೌಲ್ಯ ಸುಮಾರು 2570 ಕೋಟಿ ರೂಪಾಯಿಯಷ್ಟಿದೆ.