ರಿಸರ್ವ್ ಬ್ಯಾಂಕ್ ಜನವರಿ ಅಂತ್ಯದಿಂದಲೇ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ಕ್ರಮ ಕೈಗೊಂಡಿದೆ. ಅಂದಿನಿಂದ Paytmಗೆ ಒಂದಿಲ್ಲೊಂದು ಸಮಸ್ಯೆಗಳು ಎದುರಾಗುತ್ತಲೇ ಇವೆ. ಷೇರುಗಳ ಮೌಲ್ಯ ಕೂಡ ಪಾತಾಳಕ್ಕೆ ಕುಸಿದಿದೆ. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ವಿರುದ್ಧ ತೆಗೆದುಕೊಂಡ ಕ್ರಮದ ಮರುಪರಿಶೀಲನೆಗೆ ಅವಕಾಶವಿಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಈಗಾಗ್ಲೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ UPI ಸೇವೆಯನ್ನು ಚಾಲನೆಯಲ್ಲಿಡಲು Paytm ಕಸರತ್ತು ಮಾಡ್ತಿದೆ. Paytm ಅಪ್ಲಿಕೇಶನ್ ಅನ್ನು ಮೂರನೇ ವ್ಯಕ್ತಿಗೆ ವರ್ಗಾಯಿಸಲು ಪ್ರಯತ್ನಿಸುತ್ತಿದೆ.
ಇಷ್ಟೆಲ್ಲಾ ಸಮಸ್ಯೆಗಳ ನಡುವೆ Paytm ಪೇಮೆಂಟ್ಸ್ ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕಿಯಾಗಿದ್ದ ಮಂಜು ಅಗರ್ವಾಲ್ ರಾಜೀನಾಮೆ ನೀಡಿರೋದು ಕಂಪನಿಗೆ ಬಹುದೊಡ್ಡ ಆಘಾತ. ಅಗರ್ವಾಲ್ ಮಾತ್ರವಲ್ಲ, ಬ್ಯಾಂಕ್‌ನ ಸ್ವತಂತ್ರ ನಿರ್ದೇಶಕರಾದ ಶಿಂಜಿನಿ ಕುಮಾರ್ ಕೂಡ ಈಗಾಗ್ಲೇ ನಿರ್ದೇಶಕರ ಮಂಡಳಿಗೆ ರಾಜೀನಾಮೆ ನೀಡಿದ್ದಾರೆ.
ಅಷ್ಟಕ್ಕೂ ಮಂಜು ಅಗರ್ವಾಲ್ ಯಾರು ಎಂಬ ಕುತೂಹಲ ಸಹಜ. ಮಂಜು ಅಗರ್ವಾಲ್ ಅವರಿಗೆ 34 ವರ್ಷಗಳ ಬ್ಯಾಂಕಿಂಗ್ ಅನುಭವವಿದೆ. ಭಾರತ ಮತ್ತು ವಿದೇಶಗಳಲ್ಲಿ ಚಿಲ್ಲರೆ ಬ್ಯಾಂಕಿಂಗ್, ಡಿಜಿಟಲ್ ಬ್ಯಾಂಕಿಂಗ್ ಮತ್ತು ಗ್ರಾಹಕ ಸೇವೆಯಲ್ಲಿ ಎಸ್‌ಬಿಐನೊಂದಿಗೆ ದೀರ್ಘಕಾಲ ಕೆಲಸ ಮಾಡಿದ್ದಾರೆ. ಪಾಲಿಕ್ಯಾಬ್ ಇಂಡಿಯಾ ಲಿಮಿಟೆಡ್, ಗ್ಲೆನ್‌ಮಾರ್ಕ್ ಲೈಫ್ ಸೈನ್ಸಸ್, ಗಲ್ಫ್ ಆಯಿಲ್ ಲೂಬ್ರಿಕಂಟ್ಸ್ ಇಂಡಿಯಾ ಲಿಮಿಟೆಡ್‌ನಲ್ಲಿ ಉನ್ನತ ಹುದ್ದೆಗಳಲ್ಲಿ ಕೆಲಸ ಮಾಡಿದ್ದಾರೆ.
ಮಂಜು ಅಗರ್ವಾಲ್, ಅಲಹಾಬಾದ್ ವಿಶ್ವವಿದ್ಯಾನಿಲಯದಿಂದ ರಾಜ್ಯಶಾಸ್ತ್ರದಲ್ಲಿ ಎಂಎ ಮಾಡಿದ್ದಾರೆ. ಕೋಲ್ಕತ್ತಾದ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್‌ನಲ್ಲಿ ಅಧ್ಯಯನ ಮಾಡಿದ್ದಾರೆ. ಅನುಭವಿ ಹಾಗೂ ಉನ್ನತ ಹುದ್ದೆಯಲ್ಲಿದ್ದ ಮಂಜು ಅಗರ್ವಾಲ್ ಅವರ ರಾಜೀನಾಮೆ ಪೇಟಿಎಂಗೆ ದೊಡ್ಡ ಹೊಡೆತವನ್ನೇ ಕೊಟ್ಟಿದೆ.