ಚಿನ್ನ ಖರೀದಿಸಬೇಕು ಅನ್ನೋ ಆಸೆ ಯಾರಿಗಿರಲ್ಲ ಹೇಳಿ? ಆದರೆ ಚಿನ್ನದ ಬೆಲೆ ಎಲ್ಲಾ ದೇಶಗಳಲ್ಲೂ ಒಂದೇ ತೆರನಾಗಿರುವುದಿಲ್ಲ. ಕೆಲವು ದೇಶಗಳಲ್ಲಿ ಬಂಗಾರ ಅಗ್ಗದ ಬೆಲೆಗೆ ದೊರೆತರೆ ಇನ್ನು ಕೆಲವು ದೇಶಗಳಲ್ಲಿ ಚಿನ್ನದ ಬೆಲೆ ಕೊಂಚ ದುಬಾರಿ. ಯಾವ ದೇಶದಲ್ಲಿ ಚಿನ್ನವನ್ನು ಅಗ್ಗದ ಬೆಲೆಯಲ್ಲಿ ಖರೀದಿಸಬಹುದು ? ಎಷ್ಟು ಪ್ರಮಾಣದಲ್ಲಿ ಕೊಂಡು ತರಬಹುದು ಎಂಬುದನ್ನೆಲ್ಲ ನೋಡೋಣ.
ಚಿನ್ನ ಕೊಂಡುಕೊಳ್ಳಲು ದುಬೈ ಅತ್ಯುತ್ತಮ ಆಯ್ಕೆಯಾಗಿದೆ. ದುಬೈನಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 245 AED ಅಂದರೆ ಸರಿಸುಮಾರು 5,579.45 ರೂಪಾಯಿಯಷ್ಟಿದೆ. ಉಳಿದಂತೆ ವಿಶ್ವದ 61 ದೇಶಗಳಿಗೆ ಹೋಲಿಸಿದರೆ ಮಲಾವಿ, ಕೊಲಂಬಿಯಾ, ಆಸ್ಟ್ರೇಲಿಯಾ ಮತ್ತು ಇಂಡೋನೇಷ್ಯಾದಲ್ಲಿ ಚಿನ್ನವನ್ನು ಕಡಿಮೆ ಬೆಲೆಗೆ ಖರೀದಿಸಬಹುದು.
ಮಲಾವಿಯಲ್ಲಿ ಒಂದು ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ ಸರಿಸುಮಾರು 6,346 ರೂ., ಆಸ್ಟ್ರೇಲಿಯಾದಲ್ಲಿ 6,347 ರೂ., ಕೊಲಂಬಿಯಾದಲ್ಲಿ 6,351 ರೂ. ಮತ್ತು ಇಂಡೋನೇಷ್ಯಾದಲ್ಲಿ 6,359 ರೂಪಾಯಿಯಷ್ಟಿದೆ.
ವಿದೇಶದಲ್ಲಿ ಚಿನ್ನ ಖರೀದಿಸುವುದು ಹೇಗೆ?
ಅಗ್ಗದ ದರದಲ್ಲಿ ಚಿನ್ನವನ್ನು ಖರೀದಿಸುವುದು ಸೂಕ್ತ. ಆದರೆ ಈ ಹಳದಿ ಲೋಹವನ್ನು ವಿದೇಶದಲ್ಲಿ ಖರೀದಿಸುವಾಗ ಎಚ್ಚರಿಕೆ ವಹಿಸಬೇಕು. ಚಿನ್ನವನ್ನು ಖರೀದಿಸಲು ಮತ್ತು ಸಾಗಿಸಲು ಸಂಬಂಧಿಸಿದ ಭದ್ರತೆ, ಲಾಜಿಸ್ಟಿಕ್ಸ್ ಮತ್ತು ತೆರಿಗೆಗಳ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು.
ಕಸ್ಟಮ್ಸ್ ಸುಂಕಗಳು ಮತ್ತು ಪ್ರಯಾಣದ ಸಮಯದಲ್ಲಿ ವಿಧಿಸಲಾಗುವ ಯಾವುದೇ ಇತರ ಶುಲ್ಕಗಳ ಬಗ್ಗೆ ತಿಳಿದಿರುವುದು ಮುಖ್ಯ. ಪ್ರಸ್ತುತ ವಿನಿಮಯ ದರಗಳು ಚಿನ್ನದ ನ್ಯಾಯಯುತ ಮೌಲ್ಯದ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ನೆನಪಿಡಿ. ಮಾರುಕಟ್ಟೆಯಲ್ಲಿ ಉತ್ತಮ ಹೆಸರು ಹೊಂದಿರುವ ವಿಶ್ವಾಸಾರ್ಹ ಮೂಲಗಳಿಂದ ಚಿನ್ನವನ್ನು ಖರೀದಿಸಬೇಕು.
ಇತರ ದೇಶಗಳಿಂದ ಚಿನ್ನವನ್ನು ಖರೀದಿಸಲು ಮೂರು ವಿಶ್ವಾಸಾರ್ಹ ಆಯ್ಕೆಗಳಲ್ಲಿ ಮೊದಲನೆಯದು ಬ್ಯಾಂಕುಗಳು. ಸ್ವಿಸ್, ಆಸ್ಟ್ರಿಯನ್, ಸೌದಿ ಅರೇಬಿಯನ್ ಮತ್ತು ಹಾಂಗ್ ಕಾಂಗ್ ಬ್ಯಾಂಕುಗಳು ಚಿನ್ನವನ್ನು ಮಾರಾಟ ಮಾಡುತ್ತವೆ, ಇಲ್ಲಿ ಅತ್ಯುತ್ತಮ ವಹಿವಾಟು ದೊರೆಯುತ್ತದೆ.
ಕೆಲವು ವಿತರಕರು ಚಿನ್ನದ ಖರೀದಿಯ ಮೇಲೆ ಉತ್ತಮ ಕೊಡುಗೆಗಳನ್ನು ನೀಡುತ್ತಾರೆ ಮತ್ತು ವಿಭಿನ್ನ ಆಯ್ಕೆಗಳೂ ಲಭ್ಯವಿರುತ್ತದೆ. ಯುಎಇಯಂತಹ ಸ್ಥಳಗಳಲ್ಲಿ ಆನ್‌ಲೈನ್ ಡೀಲರ್ ಕೊಡುಗೆಗಳು ಸಾಮಾನ್ಯವಾಗಿ ಆಫ್‌ಲೈನ್ ಡೀಲರ್‌ಗಳಿಗಿಂತ ಹೆಚ್ಚು ಆಕರ್ಷಕವಾಗಿರುತ್ತವೆ.
ಮಾರುಕಟ್ಟೆಯಲ್ಲಿ ಹೆಸರು ಮಾಡಿದ ಪ್ರಸಿದ್ಧ ಆಭರಣ ವ್ಯಾಪಾರಿಗಳ ಬಳಿ ಸಹ ಚಿನ್ನ ಖರೀದಿಸಬಹುದು. ಆಭರಣಗಳ ಹೊರತಾಗಿ ನಾಣ್ಯಗಳನ್ನು ಕೂಡ ಖರೀದಿಸಿ ತರಬಹುದು.