ಡಿಸೆಂಬರ್ 17 ಅತ್ಯಂತ ವಿಶೇಷವಾದ ದಿನ. 120 ವರ್ಷಗಳ ಹಿಂದೆ 1903 ರಲ್ಲಿ ಇದೇ ದಿನ ರೈಟ್ ಸಹೋದರರು ತಮ್ಮ ವರ್ಷಗಳ ಕನಸನ್ನು ನನಸಾಗಿಸಿದರು. ಮೊದಲ ಬಾರಿ ಮಾನವರು ಆಕಾಶದಲ್ಲಿ ಪ್ರಯಾಣಿಸಿದ್ದರು. ಇದಾದ ನಂತರ ಪ್ರಯಾಣಿಕ ವಿಮಾನ ತಯಾರಿಕೆಯ ಪಯಣ ಆರಂಭವಾಯಿತು.
ಅಂದಿನಿಂದ ಇಂದಿನವರೆಗೂ ಪ್ರಯಾಣಿಕ ವಿಮಾನಗಳಲ್ಲಿ ಅನೇಕ ಬದಲಾವಣೆಗಳಾಗಿವೆ. ಈಗ ಜನಸಾಮಾನ್ಯರು ಕೂಡ ವಿಮಾನದಲ್ಲಿ ಸುಲಭವಾಗಿ ಪ್ರಯಾಣ ಮಾಡುತ್ತಾರೆ. ವಿಶ್ವದ ಮೊದಲ ಪ್ರಯಾಣಿಕ ವಿಮಾನವು ಸುಮಾರು 106 ವರ್ಷಗಳ ಹಿಂದೆ ಟೇಕ್ ಆಫ್ ಆಗಿತ್ತು. ಮೊದಲ ವಿಮಾನ ಹಾರಾಟ ಮಾಡಿದ್ದು ಅಮೆರಿಕದಲ್ಲಿ.
ಸುಮಾರು 106 ವರ್ಷಗಳ ಹಿಂದೆ, ಜನವರಿ 1, 1914 ರಂದು ವಿಶ್ವದ ಮೊದಲ ಪ್ರಯಾಣಿಕ ವಿಮಾನ ಹಾರಾಟ ನಡೆಸಿತು. ಇದನ್ನು ‘ಫ್ಲೈಯಿಂಗ್ ಬೋಟ್’ ಎಂದು ಕರೆಯಲಾಗುತ್ತದೆ. ಸೇಂಟ್ ಲೂಯಿಸ್‌ನ ಥಾಮಸ್ ಬೆನೊಯಿಸ್ ಇದನ್ನು ವಿನ್ಯಾಸಗೊಳಿಸಿದ್ದಾರೆ. ಈ ವಿಮಾನವು ಫ್ಲೋರಿಡಾ, ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಟ್ಯಾಂಪಾದಲ್ಲಿನ ಎರಡು ನಗರಗಳ ನಡುವೆ ಹಾರಾಟ ನಡೆಸಿತು.
ಅದರ ಮತ್ತೊಂದು ಮಾದರಿ 14 ಬೆನೊವಾ ಏರ್‌ಬೋಟ್‌ನ ಗರಿಷ್ಠ ವೇಗ ಗಂಟೆಗೆ 103 ಕಿಲೋಮೀಟರ್ ಎಂದು ಹೇಳಲಾಗುತ್ತದೆ.
ಮೊದಲ ವಿಮಾನವು ಸೇಂಟ್ ಪೀಟರ್ಸ್‌ಬರ್ಗ್ ಮತ್ತು ಟ್ಯಾಂಪಾ ನಡುವಿನ 34 ಕಿಲೋಮೀಟರ್ ದೂರವನ್ನು ಕ್ರಮಿಸಲು ಸುಮಾರು 23 ನಿಮಿಷಗಳನ್ನು ತೆಗೆದುಕೊಂಡಿತು. ಈ ವಿಮಾನದ ಪೈಲಟ್‌ನ ಹೆಸರು ಟೋನಿ ಜಾನಸ್.
ಸುಮಾರು 567 ಕೆಜಿ ತೂಕದ, 8 ಮೀಟರ್ ಉದ್ದ ಮತ್ತು 13 ಮೀಟರ್ ಅಗಲವಿರುವ ‘ಫ್ಲೈಯಿಂಗ್ ಬೋಟ್’ ಅನ್ನು ರೈಲಿನಲ್ಲಿ ಸೇಂಟ್ ಪೀಟರ್ಸ್ ಬರ್ಗ್‌ಗೆ ತರಲಾಯ್ತು. ಈ ವಿಮಾನದಲ್ಲಿ ಒಬ್ಬ ಪೈಲಟ್ ಮತ್ತು ಒಬ್ಬ ಪ್ರಯಾಣಿಕನಿಗೆ ಮಾತ್ರ ಆಸನ ವ್ಯವಸ್ಥೆ ಇತ್ತು. ವಿಶೇಷ ಅಂದ್ರೆ ಇದು ಮರದಿಂದ ಮಾಡಿದ ಆಸನ.
ಬಲು ದುಬಾರಿ ಮೊದಲ ವಿಮಾನದ ಟಿಕೆಟ್ !
1914ರಲ್ಲಿ ಪ್ರಯಾಣಿಕ ವಿಮಾನದ ಟಿಕೆಟ್ ಅನ್ನು ಮೊದಲ ಬಾರಿಗೆ ಹರಾಜು ಹಾಕಲಾಯ್ತು. ಈ ಹರಾಜಿನಲ್ಲಿ ಸುಮಾರು 3,000 ಜನರು ಪಾಲ್ಗೊಂಡಿದ್ದರು. ಆದರೆ ವಿಮಾನದಲ್ಲಿ ಕುಳಿತುಕೊಳ್ಳಲು ಅವಕಾಶವಿದ್ದಿದ್ದು ಒಬ್ಬ ವ್ಯಕ್ತಿಗೆ ಮಾತ್ರ. ಏರ್ ಟಿಕೆಟ್ ಅನ್ನು 400 ಡಾಲರ್‌ಗಳಿಗೆ ಹರಾಜು ಮಾಡಲಾಯಿತು. ಆ ಟಿಕೆಟ್‌ನ ಇಂದಿನ ಬೆಲೆ ಸುಮಾರು 6 ಲಕ್ಷ ರೂಪಾಯಿ.
ವಿಮಾನವು ದಿನಕ್ಕೆ ಎರಡು ಬಾರಿ ವಾರದ 6 ದಿನಗಳು ಹಾರುತ್ತಿತ್ತು. ಅವುಗಳ ಟಿಕೆಟ್ ಬೆಲೆ 5 ಡಾಲರ್. ಸುಮಾರು 4 ತಿಂಗಳ ನಂತರ ಈ ವಿಮಾನದ ಸೇವೆಗಳನ್ನು ನಿಲ್ಲಿಸಲಾಯಿತು. ದಾಖಲೆಗಳ ಪ್ರಕಾರ ಈ ಅವಧಿಯಲ್ಲಿ ಮೊದಲ ಪ್ರಯಾಣಿಕ ವಿಮಾನವು ಒಟ್ಟು 1,205 ಪ್ರಯಾಣಿಕರಿಗೆ ಸೇವೆ ಸಲ್ಲಿಸಿದೆ.