ಬದಲಾಗುತ್ತಿರುವ ಜೀವನ ಶೈಲಿ ನಮ್ಮನ್ನು ಅನಾರೋಗ್ಯಗೊಳಿಸುತ್ತಿದೆ. ಚಿಕ್ಕ ವಯಸ್ಸಿನಲ್ಲಿಯೇ ಹೃದಯಾಘಾತದಂತಹ ಸಮಸ್ಯೆಗಳು ಕಾಡುತ್ತಿವೆ. ಅಧಿಕ ರಕ್ತದೊತ್ತಡ, ಹೆಚ್ಚಿನ ಕೊಬ್ಬು ಮತ್ತು ಥೈರಾಯಿಡ್ ರೋಗಿಗಳಿಗೆ ಹೃದಯಾಘಾತ ಕಾಡುವುದು ಹೆಚ್ಚು. ಹೃದಯಾಘಾತವಾಗ್ತಿದ್ದಂತೆ ಏನು ಮಾಡಬೇಕೆಂಬುದು ಜನರಿಗೆ ತಿಳಿಯೋದಿಲ್ಲ. ವೈದ್ಯರು ಬರುವವರೆಗೆ ಅಥವಾ ರೋಗಿ ಆಸ್ಪತ್ರೆ ತಲುಪುವ ಮೊದಲೇ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.
ಹೃದಯಾಘಾತ ಹೇಗಾಗುತ್ತದೆ ಎಂಬುದನ್ನು ಮೊದಲು ತಿಳಿಯಬೇಕು. ಆರಂಭದಲ್ಲಿ ವಾಂತಿ, ಎದೆಯಲ್ಲಿ ನೋವು, ತಲೆ ಸುತ್ತು, ಕೈ, ಭುಜ, ಕುತ್ತಿಗೆ, ಕೈ ಬೆರಳಿನ ನೋವು, ಪ್ರಕ್ಷುಬ್ಧ ಮನಸ್ಸು, ಚಡಪಡಿಕೆ, ಉಸಿರಾಡಲು ತೊಂದರೆ, ಹೆಚ್ಚು ಬೆವರು, ದುರ್ಬಲತೆ, ಒತ್ತಡ ಹಾಗೂ ಹೆದರಿಕೆ ಇವೆಲ್ಲವೂ ಕಾಡುತ್ತದೆ.
ಹೃದಯಾಘಾತವಾದ ವ್ಯಕ್ತಿ ಬಟ್ಟೆಯನ್ನು ಸಡಿಲಿಸಿ ಸಮವಾದ ಜಾಗದಲ್ಲಿ ಮಲಗಿಸಿ. ತಲೆ ಸ್ವಲ್ಪ ಕೆಳಗಿರಲಿ. ಕಾಲನ್ನು ಸ್ವಲ್ಪ ಮೇಲಕ್ಕಿರಿಸಿ. ಇದು ಹೃದಯಕ್ಕೆ ರಕ್ತ ಪೂರೈಕೆ ಮಾಡಲು ನೆರವಾಗುತ್ತದೆ.
ರೋಗಿಗೆ ವಾಂತಿ ಬಂದ್ರೆ ಮುಖವನ್ನು ನೋವಾಗದಂತೆ ಒಂದು ಕಡೆ ವಾಲಿಸಿ.
ರೋಗಿಯ ಪಲ್ಸ್ ಹಾಗೂ ಉಸಿರನ್ನು ಪರೀಕ್ಷಿಸಿ. ನಾಡಿ ಬಡಿತ ನಿಂತಿದ್ದರೆ ಆಸ್ಪತ್ರೆ ತಲುಪುವವರೆಗೂ ಸಿಪಿಆರ್ ಮಾಡಿ. ರೋಗಿಯ ಎದೆ ಮೇಲೆ ನಿಮ್ಮ ಹಸ್ತವನ್ನಿಟ್ಟು ಕೆಳಮುಖವಾಗಿ ಒತ್ತಿ. ಪ್ರತಿ ನಿಮಿಷಕ್ಕೆ ಕನಿಷ್ಟ ನೂರು ಬಾರಿ ಹೀಗೆ ಮಾಡಿ.
ಹೃದಯಾಘಾತದಿಂದ ಬಳಲುವ ರೋಗಿಗಳಿಗೆ ಉಸಿರಾಡಲು ತೊಂದರೆಯಾಗುತ್ತದೆ. ಈ ವೇಳೆ ರೋಗಿಯ ಮೂಗನ್ನು ಮುಚ್ಚಿ ಬಾಯಿಯಿಂದ ಉಸಿರು ನೀಡಿ. ಹೀಗೆ ಮಾಡಿದ್ರೆ ನೇರವಾಗಿ ಗಾಳಿ ಶ್ವಾಸಕೋಶ ತಲುಪಲು ನೆರವಾಗುತ್ತದೆ.
ಹೃದಯಾಘಾತವಾಗದಂತೆ ತಡೆಯಲು ಪ್ರತಿ ದಿನ ಗ್ರೀನ್ ಟೀ, ಶುಂಠಿ ರಸ, ಸ್ವೀಟ್ ಕಾರ್ನ್ ಸೇವನೆ ಮಾಡಿ.
ಮೀನು ಕಣ್ಣಿಗೊಂದೇ ಅಲ್ಲ ಹೃದಯಕ್ಕೂ ಒಳ್ಳೆಯದು. ಹಾಗಾಗಿ ವಾರಕ್ಕೊಮ್ಮೆ ಮೀನು ತಿನ್ನಿ.
ತುಳಸಿ ಹಾಗೂ ಪುದೀನಾ ರಸಕ್ಕೆ ಉಪ್ಪು ಹಾಕಿ ಪ್ರತಿ ದಿನ ಸೇವನೆ ಮಾಡಿ. ಇದು ಹೃದಯ ಸಮಸ್ಯೆ ಹಾಗೂ ಹೃದಯಾಘಾತವನ್ನು ತಪ್ಪಿಸುತ್ತದೆ.