ಹೆಣ್ಣು ಮಕ್ಕಳಿಗೆ ಗೌರಿ ಹಬ್ಬ ತವರು ಮನೆಯನ್ನು ನೆನಪಿಸೋ ಸಂಭ್ರಮದ ಹಬ್ಬ. ತಾಯಿ ಗೌರಿಯೂ ಸಹ ವರ್ಷಕ್ಕೊಮ್ಮೆ ತನ್ನ ತವರು ಮನೆಗೆ ಮಗನ ಸಮೇತ ಭೂಲೋಕಕ್ಕೆ ಬರುತ್ತಾಳೆ ಎಂಬ ನಂಬಿಕೆಯೂ ಈ ಹಬ್ಬದ ಜೊತೆಗಿದೆ.
ಗೌರೀ ಹಬ್ಬದಲ್ಲಿ ಸುಮಂಗಲಿಯರಿಗೆ ಮೊರದ ಬಾಗಿನ ಕೊಡುವುದು ಸಂಪ್ರದಾಯ. ಮೊರದ ಬಾಗಿನ ಬಹಳ ಶ್ರೇಷ್ಟವೂ ಹೌದು. ಸಿಂಗರಿಸಿದ ಮೊರದ ಬಾಗಿನದ ನಾಲ್ಕೂ ತುದಿಗೆ ಅರಿಶಿನ ಕುಂಕುಮ ಹಚ್ಚಿ, ನಂತರ ಒಂದು ಮೊರದ ಒಳಗೆ ಮೊದಲು ಸ್ವಲ್ಪ ಕಲ್ಲುಪ್ಪು ಹಾಕಿ, ಬಾಳೆ ಎಲೆ ಅದರ ಮೇಲಿಟ್ಟು ಅಕ್ಕಿ, ರವೆ, ಬೆಲ್ಲ, ತೊಗರಿ ಹಾಗೂ ಹೆಸರು ಬೇಳೆ, ತೆಂಗಿನ ಕಾಯಿ, ವೀಳ್ಯದೆಲೆ ಯಥಾ ಶಕ್ತಿ ದಕ್ಷಿಣೆ, ಅರಿಶಿನ ಕುಂಕುಮ, ಒಂದು ಹಣ್ಣು, ರವಿಕೆ, ಬಳೆ ಹಾಗೂ ಅರಿಶಿಣದ ಕೊಂಬು, ಕರಿಮಣಿ ಗೊಂಚಲು, ಗೆಜ್ಜೆ ವಸ್ತ್ರ ಇಷ್ಟು ಇಟ್ಟು ಮತ್ತೊಂದು ಮೊರವನ್ನು ಮೇಲಿನಿಂದ ಮುಚ್ಚಿ. ಇಂತಹ ಒಂದು ಜೊತೆ ಮೊರದ ಬಾಗಿನ ಮೊದಲು ತಾಯಿ ಗೌರಿಗೆ ನಂತರ ಮತ್ತೊಂದು ತವರು ಮನೆಗೆ, ಮಿಕ್ಕ ಬಾಗಿನಗಳನ್ನು ಸುಮಂಗಲಿಯರು ಯಥಾ ಶಕ್ತಿ ಕೊಡಿ.
ಮೊರದ ಬಾಗಿನ ಕೊಡುವುದು ಸೌಭಾಗ್ಯದ ಸಂಕೇತ. ಬಾಗಿನ ಕೊಡುವುದರ ಮೂಲಕ ಗೌರಿಯನ್ನು ಸಂತೃಪ್ತಿಪಡಿಸಿ ತಾಯಿಯ ಕೃಪೆಗೆ ಪಾತ್ರರಾಗಬಹುದು.