ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ, ನೇತೃತ್ವದ ಟೀಂ ಇಂಡಿಯಾ, ತವರಿನಲ್ಲಿ ಶ್ರೀಲಂಕಾ ಎದುರು ಮೂರು ಪಂದ್ಯಗಳ ಏಕದಿನ ಸರಣಿಯನ್ನಾಡುತ್ತಿದೆ. ಭಾರತ ಹಾಗೂ ಶ್ರೀಲಂಕಾ ತಂಡಗಳ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಗೌಹಾಟಿಯ ಬರ್ಸಾಪರ ಕ್ರಿಕೆಟ್ ಮೈದಾನ ಆತಿಥ್ಯವನ್ನು ವಹಿಸಿದೆ.
ಮೊದಲ ಏಕದಿನ ಪಂದ್ಯಕ್ಕೂ ಮುನ್ನ ರೋಹಿತ್ ಶರ್ಮಾ, ಕೆಲ ಅಭಿಮಾನಿಗಳ ಬಳಿ ಹೋಗಿ ಕೆಲಕಾಲ ಮಾತುಕತೆಯನ್ನು ನಡೆಸಿದರು. ಆದರೆ ರೋಹಿತ್ ಶರ್ಮಾ ಅವರ ಅಪ್ಪಟ ಅಭಿಮಾನಿಯಾಗಿರುವ ಪುಟ್ಟ ಬಾಲಕ, ಹಿಟ್‌ಮ್ಯಾನ್ ತನ್ನತ್ತ ಬರುತ್ತಿದ್ದಂತೆಯೇ ಖುಷಿಯಲ್ಲಿ ಆನಂದ ಭಾಷ್ಪ ಸುರಿಸಿದ. ಆಗ ರೋಹಿತ್ ಅವರು ಈ ಪುಟ್ಟ ಅಭಿಮಾನಿಯ ಬಳಿ ಹೋಗಿ ಆತನನ್ನು ಸಂತೈಸಿದರು.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಅಭಿಮಾನಕ್ಕೆ ನೆಟ್ಟಿಗರು ಫಿದಾ ಆಗಿದ್ದಾರೆ. ರೋಹಿತ್ ಶರ್ಮಾ ಅವರನ್ನು ನೋಡಲು ಸಾಧ್ಯವಿಲ್ಲದ ಕಾರಣ ಈ ಬಾಲಕ ಅಳುತ್ತಿದ್ದ. ಕೊನೆಗೆ ರೋಹಿತ್ ಅವರು ಬಾಲಕನ ಬಳಿ ಸಾಗಿ ಸಂತೈಸುತ್ತಿರುವುದನ್ನು ನೋಡಿ ನಿಜಕ್ಕೂ ಕಣ್ತುಂಬಿ ಬಂತು ಎಂದು ಹಲವರು ಹೇಳಿದ್ದಾರೆ.