ಶ್ರಾವಣ ಮಾಸದ ದೊಡ್ಡ ಹಬ್ಬ ವರಮಹಾಲಕ್ಷ್ಮಿ. ಹೆಂಗಳೆಯರು ಇದಕ್ಕಾಗಿ ತಿಂಗಳಿಂದಲೆ ತಯಾರಿ ಮಾಡಿಕೊಂಡಿರುತ್ತಾರೆ. ಮುಖ್ಯವಾಗಿ ಕಳಶ ಇಡುವುದು, ಅದಕ್ಕೆ ಸೀರೆ ಉಡಿಸುವುದು ಈ ಹಬ್ಬದ ಪ್ರಮುಖ ಆಕರ್ಷಣೆ. ತಾಯಿ ಮಹಾಲಕ್ಷ್ಮಿಯನ್ನು ಕಳಶ ರೂಪದಲ್ಲಿ ಸ್ಥಾಪಿಸಿ, ಆವಾಹಿಸಿ ಪೂಜೆ ಮಾಡುವುದು, ಆಕೆಯ ಅನುಗ್ರಹ ಬೇಡುವುದು ವಾಡಿಕೆ.
ಕಳಶ ಇಡುವಾಗ ಯಾವ ಲೋಹದ ಬಿಂದಿಗೆ ಅಥವಾ ಚೊಂಬು ಇಡಬೇಕು ಎನ್ನುವ ಪ್ರಶ್ನೆ ಕಾಡಬಹುದು. ಬೆಳ್ಳಿ ಕಳಶ ಎಲ್ಲಕ್ಕಿಂತ ಶ್ರೇಷ್ಠ. ಬೆಳ್ಳಿಯ ಬಿಂದಿಗೆ ಇಡಲು ಶಕ್ತಿ ಇಲ್ಲದವರು ತಾಮ್ರದ ಬಿಂದಿಗೆ ಇಡಬಹುದು. ತಾಮ್ರ ಶ್ರೇಷ್ಠ ಲೋಹ. ತಾಮ್ರದ ಬಿಂದಿಗೆಯಲ್ಲಿ ನೀರು ಶೇಖರಿಸಿ ಕುಡಿದರೆ ಆರೋಗ್ಯಕ್ಕೆ ಒಳ್ಳೆಯದು ಎಂಬ ವಿಷಯ ವಿಜ್ಞಾನವೂ ಪುರಸ್ಕರಿಸಿದೆ. ಅಂದ ಮೇಲೆ ಬೆಳ್ಳಿಯ ಬದಲು ತಾಮ್ರದ ಬಿಂದಿಗೆಯನ್ನು ಕಲಶಕ್ಕೆ ಇಡಬಹುದು.
ಯಾವುದೇ ಕಾರಣಕ್ಕೂ ಸ್ಟೀಲ್ ಬಿಂದಿಗೆಯನ್ನು ಕಳಸಕ್ಕೆ ಇಡಬೇಡಿ. ಸ್ಟೀಲ್ ನಲ್ಲಿ ಕಬ್ಬಿಣದಂಶ ಇರುತ್ತದೆ. ಕಬ್ಬಿಣ ಲೋಹವು ಶನಿದೇವರ ಲೋಹ. ಹಾಗಾಗಿ ಲಕ್ಷ್ಮಿ ಪೂಜೆಗೆ ಬೆಳ್ಳಿ ಅಥವಾ ತಾಮ್ರದ ಬಿಂದಿಗೆಯ ಉಪಯೋಗ ಮಾಡಿ.