ಮಹಿಳೆಯರು ಗರ್ಭ ಧರಿಸಲು ಸೂಕ್ತ ವಯಸ್ಸು ಯಾವುದು ಅನ್ನೋ ಬಗ್ಗೆ ಸಾಕಷ್ಟು ಮಾಹಿತಿಗಳು ನಿಮಗೆ ಸಿಗುತ್ತವೆ. ಹಾಗಾಗಿ ಸಹಜವಾಗಿಯೇ ಗೊಂದಲ ಕಾಡುತ್ತದೆ. ಅನುಭವಿಗಳು ಒಂದು ರೀತಿಯ ಸಲಹೆ ನೀಡಿದ್ರೆ, ವೈದ್ಯಲೋಕ ಇನ್ನೊಂದು ಹೇಳುತ್ತದೆ. ಅಸಲಿಗೆ ಗರ್ಭ ಧರಿಸಲು ಸೂಕ್ತ ಮ್ಯಾಜಿಕಲ್ ಸಮಯ ಅನ್ನೋದೇ ಇಲ್ಲ.
20ನೇ ವಯಸ್ಸಿನಲ್ಲಿ ನಿಮ್ಮ ದೇಹ ಗರ್ಭಧಾರಣೆಗೆ ಸಜ್ಜಾಗಿರುತ್ತದೆ. ನಿಮ್ಮ ದೇಹಕ್ಕೆ ಮಗುವಿನ ಭಾರ ಹೊರಬಲ್ಲ ಶಕ್ತಿ, ಸಾಮರ್ಥ್ಯವಿರುತ್ತದೆ ಎನ್ನುತ್ತಾರೆ ವೈದ್ಯರು. ಅಷ್ಟೇ ಅಲ್ಲ 20ರ ಆಸುಪಾಸಿನಲ್ಲಿ ಗರ್ಭಿಣಿಯಾದವರಿಗೆ ಹೆಚ್ಚು ಅಪಾಯವೂ ಇರುವುದಿಲ್ಲ.
ಗರ್ಭಾವಸ್ಥೆಯಲ್ಲಿ ಡಯಾಬಿಟೀಸ್ ನಂತಹ ಸಮಸ್ಯೆಗಳು ಬರುವುದಿಲ್ಲ. ಅಷ್ಟೇ ಅಲ್ಲ 20ರಲ್ಲಿ ಗರ್ಭಿಣಿಯಾದ್ರೆ ಭವಿಷ್ಯದಲ್ಲಿ ಸ್ತನ ಮತ್ತು ಓವರಿಯನ್ ಕ್ಯಾನ್ಸರ್ ಬರುವ ಸಾಧ್ಯತೆಗಳು ಬಹಳ ಕಡಿಮೆ. ಫರ್ಟಿಲಿಟಿ ರೇಟ್ ಕೂಡ ಜಾಸ್ತಿಯಾಗಿರುತ್ತದೆ. ಗರ್ಭಪಾತದ ಅಪಾಯ ಶೇ.12 ಕ್ಕಿಂತ್ಲೂ ಕಡಿಮೆಯಿರುತ್ತದೆ.
20 ರ ಹರೆಯಲ್ಲಿ ಅಮ್ಮನಾಗಲು ದೇಹವೇನೋ ರೆಡಿ. ಆದ್ರೆ ಮನಸ್ಸು ಮಾತ್ರ ಗೊಂದಲದಲ್ಲಿರುತ್ತದೆ. ಯಾಕಂದ್ರೆ ಅದು ನಿಮ್ಮ ಪ್ರಮೋಷನ್ ಸಮಯವಾಗಿರಬಹುದು, ಉದ್ಯೋಗದಲ್ಲಿ ಉತ್ತಮ ಅವಕಾಶಗಳು ದೊರೆಯಬಹುದು. ಅಷ್ಟೇ ಅಲ್ಲ ಸಂಬಂಧಗಳು ಕೂಡ ಹೊಸದಾಗಿರುತ್ತವೆ.
ಆಗ ದಿಢೀರ್ ಅಂತಾ ಮಗುವಿನ ಭಾರ ಬಿದ್ದು, ಒತ್ತಡ ಹೆಚ್ಚಾಗುವ ಸಾಧ್ಯತೆ ಇರುತ್ತದೆ. ಹಣಕಾಸಿನ ಅಡಚಣೆಗಳೂ ಇರಬಹುದು. ಯಂಗ್ ಏಜ್ ಆಗಿರೋದ್ರಿಂದ ಉತ್ಸಾಹ ಹೆಚ್ಚಾಗಿರುತ್ತದೆ. ಇನ್ನೊಂದು ಪ್ರಯೋಜನ ಅಂದ್ರೆ ಹುಟ್ಟೋ ಮಗು ವಿಕಲಚೇತನವಾಗುವ ಸಾಧ್ಯತೆ ಅತ್ಯಂತ ಕಡಿಮೆ ಇರುತ್ತದೆ.
35 ವರ್ಷ ಆಯ್ತು ಅಂದ್ರೆ ಮಗುವಾಗೋದಿಲ್ಲ ಅನ್ನೋ ಮಾತಿದೆ. ಆದ್ರೆ 30ರಲ್ಲಿ ಅಮ್ಮನಾಗೋದು ಕೂಡ 20 ಹರೆಯದಲ್ಲಿ ಆದಂತೆಯೇ ಇರುತ್ತದೆ. ಅಪಾಯ ಕಡಿಮೆಯಿರುತ್ತದೆ. ಅಧಿಕ ರಕ್ತದೊತ್ತಡ ಅಥವಾ ಡಯಾಬಿಟಿಸ್ ಬಂದ್ರೆ ಪದೇ ಪದೇ ವೈದ್ಯರನ್ನು ಭೇಟಿ ಮಾಡಬೇಕಷ್ಟೆ.
ಆದ್ರೆ 30ರ ನಂತರ ಸಹಜ ಹೆರಿಗೆ ಸ್ವಲ್ಪ ಕಷ್ಟ. ಸಿಸೇರಿಯನ್ ಅಗತ್ಯವೇ ಹೆಚ್ಚಾಗಿರುತ್ತದೆ. 35-40 ವರ್ಷದಲ್ಲಿ ಗರ್ಭಪಾತದ ಅಪಾಯ ಶೇ.25ರಷ್ಟಿರುತ್ತದೆ. ಜೀವನವನ್ನು ಆರಾಮಾಗಿ ಎಂಜಾಯ್ ಮಾಡಿ, ಸೇವಿಂಗ್ಸ್ ಮಾಡಿಕೊಂಡು, ಸುರಕ್ಷಿತ ಉದ್ಯೋಗವನ್ನು ಹೊಂದಬಹುದು.
ಆದ್ರೆ 35ರ ನಂತರ ತಾಯಿಯಾಗುವುದರಿಂದ ಅಪಾಯಗಳು ಹೆಚ್ಚಾಗಿರುತ್ತವೆ. ಡೌನ್ ಸಿಂಡ್ರೋಮ್ ನಿಂದ ಮಗುವನ್ನು ಕಳೆದುಕೊಳ್ಳುವ ಅಪಾಯವೂ ಇರುತ್ತದೆ. ಆದ್ರೆ 35 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಜನಿಸಿದ ಮಕ್ಕಳು ಕೂಡ ಆರೋಗ್ಯವಾಗಿರುತ್ತವೆ. ಭಯಪಡಬೇಕಾದ ಅಗತ್ಯವಿಲ್ಲ.