ಸಾಮಾನ್ಯವಾಗಿ ನೀವು ಕೆಲವರ ಮನೆಗಳಲ್ಲಿ ಇಲ್ಲವೆ ಅಂಗಡಿಗಳಲ್ಲಿ ಓಡುತ್ತಾ ಇರೋ ಬಿಳಿ ವರ್ಣದ ಸಪ್ತಾಶ್ವಗಳ ಫೋಟೋ ಹಾಕಿರೋದನ್ನ ನೋಡಿರ್ತಿರಾ. ಇದು ಗೋಡೆ ಅಂದ ಹೆಚ್ಚಿಸೋಕೆ ಮಾತ್ರ ಹಾಕೋ ಫೋಟೋ ಅಲ್ಲ, ಸಪ್ತಾಶ್ವಗಳ ಭಾವಚಿತ್ರ ಹಾಕೋದ್ರಿಂದ ನಿಮ್ಮ ಮನೆಯ ಅಭಿವೃದ್ಧಿ ಉತ್ತುಂಗಕ್ಕೇರುತ್ತೆ ಎನ್ನುತ್ತೆ ವಾಸ್ತು ಶಾಸ್ತ್ರ.
ವಾಸ್ತು ಶಾಸ್ತ್ರದ ಪ್ರಕಾರ ಓಡುತ್ತಿರುವ ಕುದುರೆಗಳು ಉನ್ನತಿ, ಶಕ್ತಿ ಹಾಗೂ ಲಾಭದ ಸಂಕೇತವಾಗಿದೆ. ಹಾಗೂ ಬಿಳಿಯ ಬಣ್ಣದ ಏಳು ಕುದುರೆಗಳು ಸಕಾರಾತ್ಮಕ ಚಿಂತನೆಗಳನ್ನ ವಿನಿಮಯ ಮಾಡೋ ಶಕ್ತಿ ಹೊಂದಿವೆ. ಹೀಗಾಗಿ ಎಲ್ಲೆಲ್ಲಿ ಇಂತಹ ಭಾವಚಿತ್ರಗಳನ್ನ ಹಾಕ್ತಾರೋ ಅಲ್ಲೆಲ್ಲ ಋಣಾತ್ಮಕ ಚಿಂತನೆಗಳು ದೂರವಾಗ್ತಾವೆ ಎಂಬ ನಂಬಿಕೆ ಇದೆ. ಇನ್ನು ವ್ಯವಹಾರ ನಡೆಸುವ ಸ್ಥಳಗಳಲ್ಲಿ ಈ ಫೋಟೋ ಹಾಕೋದ್ರಿಂದ ಯಾವ ವ್ಯಕ್ತಿಯ ಕಣ್ಣು ಈ ಫೋಟೋದ ಮೇಲೆ ಬೀಳುತ್ತೋ ಆ ವ್ಯಕ್ತಿಯಿಂದ ಮಾಲೀಕನಿಗೆ ಲಾಭ ಕಾದಿದೆ ಅಂತಾ ಹೇಳುತ್ತಾರೆ.
ಇನ್ನು ಹಿಂದೂ ಧರ್ಮದಲ್ಲಿ 7 ಸಂಖ್ಯೆಗೂ ಮಹತ್ವವಿದೆ. ಇಂದ್ರ ಧನಸ್ಸಿನ 7 ಬಣ್ಣ, ಸಪ್ತಪದಿ ಸೇರಿದಂತೆ ವಿವಿಧ ಮಹತ್ಕಾರ್ಯಕ್ಕೆ 7 ಸಂಖ್ಯೆಯನ್ನ ಆಯ್ಕೆ ಮಾಡಿಕೊಳ್ತಾರೆ.
ಇನ್ನು ಈ ರೀತಿಯ ಭಾವಚಿತ್ರವನ್ನ ನೀವು ಖರೀದಿ ಮಾಡೋರಿದ್ರೆ ಕೆಲವೊಂದು ಅಂಶಗಳನ್ನ ನೀವು ಗಮನದಲ್ಲಿ ಇಡಬೇಕು. ಭಾವಚಿತ್ರದಲ್ಲಿ ಕುದುರೆಗೆ ಲಗಾಮನ್ನ ಹಾಕಿರಬಾರದು. ಅಲ್ಲದೇ ಅಶ್ವಗಳ ಮುಖದಲ್ಲಿ ಆಕ್ರೋಶವಿಲ್ಲದೇ ಮಂದಹಾಸದಿಂದ ಇರುವ ಫೋಟೋವನ್ನೆ ಖರೀದಿ ಮಾಡಿ.
ಇನ್ನು ಈ ಕುದುರೆಗಳ ಫೋಟೋಗಳನ್ನ ಪೂರ್ವ ದಿಕ್ಕಿನಲ್ಲೇ ಹಾಕಬೇಕು. ಅಂಗಡಿಗಳಲ್ಲಿ ಈ ಫೋಟೋ ಹಾಕೋ ಚಿಂತನೆಯಲ್ಲಿ ನೀವಿದ್ರೆ ಕ್ಯಾಬಿನ್ ಗೋಡೆಯಲ್ಲಿ ಹೊರಗಿನಿಂದ ಒಳಗೆ ಬರುತ್ತಿರೋ ರೀತಿಯಲ್ಲಿ ಕುದುರೆ ಫೋಟೋಗಳನ್ನ ಹಾಕಿ.
ಸಾಧಾರಣವಾಗಿ ಈ ಕುದುರೆಗಳ ಫೋಟೋವನ್ನ ಅಂಗಡಿಗಳಲ್ಲಿ, ಆಫೀಸ್ಗಳಲ್ಲಿ ಹಾಕಲಾಗುತ್ತೆ. ನೀವೇನಾದ್ರೂ ಮನೆಯಲ್ಲಿ ಈ ರೀತಿಯ ಭಾವಚಿತ್ರ ಹಾಕೋಕೆ ಪ್ಲಾನ್ ಮಾಡ್ತಿದ್ರೆ ಒಮ್ಮೆ ವಾಸ್ತು ಶಾಸ್ತ್ರಜ್ಞರನ್ನ ಕೇಳೋದು ಒಳ್ಳೇದು. ವಾಸ್ತ್ರು ಶಾಸ್ತ್ರಜ್ಞರ ಅಭಿಪ್ರಾಯ ಆಧರಿಸಿ ನಿಮ್ಮ ಮನೆಯಲ್ಲಿ ಯಾವ ದಿಕ್ಕಿಗೆ ಫೋಟೋ ಹಾಕಿದ್ರೆ ಒಳ್ಳೆಯದು ನಿರ್ಧರಿಸಿ.