
ಮನುಕುಲದ ಉದ್ಧಾರಕ್ಕೆ ಮಹತ್ವದ ಕೊಡುಗೆಗಳನ್ನು ನೀಡುವ ವ್ಯಕ್ತಿಗಳ ಸಾಧನೆಯನ್ನು ಸನ್ಮಾನಿಸಲೆಂದು 1901ರಿಂದ ನೊಬೆಲ್ ಪಾರಿತೋಷಕ ಕೊಡಲಾಗುತ್ತಿದೆ. ಆಲ್‌ಫ್ರೆಡ್ ನೊಬೆಲ್ ಈ ಪಾರಿತೋಷಕದ ಸೃಷ್ಟಿಕರ್ತನಾಗಿದ್ದು, ಆತನ ಆಶಯದಂತೆ ಅಪ್ರತಿಮ ಸಾಧಕರನ್ನು ಸನ್ಮಾನಿಸಲು ಆತನದ್ದೇ ಹೆಸರಿನಲ್ಲಿ ಈ ಗೌರವವನ್ನು ನೀಡುತ್ತಾ ಬರಲಾಗಿದೆ.
ಈ ಪಾರಿತೋಷಕದ ಬಗ್ಗೆ ಕೆಲ ಇಂಟರೆಸ್ಟಿಂಗ್ ವಿಷಯಗಳು ಇಂತಿವೆ:
1. ಏಪ್ರಿಲ್ 12. 1888ರಲ್ಲಿ ಆಲ್‌ಫ್ರೆಡ್ ನೊಬೆಲ್ ಸಹೋದರ ಲಡ್ವಿಗ್ ಫ್ರಾನ್ಸ್‌ನ ಕ್ಯಾನೆಸ್‌ನಲ್ಲಿ ಮೃತಪಡುತ್ತಾರೆ. ಆದರೆ ಈ ವಿಚಾರವನ್ನು ಸರಿಯಾಗಿ ಅರಿಯದ ಲಾ ಫಿಗಾರೋ ಸುದ್ದಿ ಪತ್ರಿಕೆ ಆಲ್‌ಫ್ರೆಡ್ ಮೃತಪಟ್ಟಿರುವುದಾಗಿ ತನ್ನ ಮುಖಪುಟದಲ್ಲೇ ವರದಿ ಮಾಡುತ್ತದೆ. “ಮನುಕುಲಕ್ಕೆ ಸಹಾಯ ಮಾಡಿದ ಎಂದು ಹೇಳಲು ಕಷ್ಟವಾಗುವ ವ್ಯಕ್ತಿಯೊಬ್ಬ ಮೃತಪಟ್ಟಿದ್ದಾನೆ. ಈತ ನೊಬೆಲ್, ಡೈನಮೈಟ್‌ನ ಸಂಶೋಧಕ,” ಎಂದು ಹೆಡ್ಲೈನ್ ಕೊಡಲಾಗಿತ್ತು.
ಈ ಘಟನೆಯಿಂದ ಸ್ಪೂರ್ತಿ ಪಡೆದ ನೊಬೆಲ್, ತನ್ನ ಹೆಸರಿನಲ್ಲಿ ಪಾರಿತೋಷಕ ಆರಂಭಿಸಿ, “ಮನುಕುಲಕ್ಕೆ ಮಹತ್ತರವಾದ ಪ್ರಯೋಜನ ಮಾಡಿರುವ ಮಂದಿಗೆ ನೀಡಿ ಸನ್ಮಾನಿಸಲು ವಿಲ್ ಬರೆದಿಟ್ಟಿದ್ದಾಗಿ ಬಹಳ ಮಂದಿ ಹೇಳುತ್ತಾರೆ.
ಆದರೆ ಈ ಘಟನೆಯ ಬಗ್ಗೆ ನೊಬೆಲ್‌ನ ಆತ್ಮಚರಿತ್ರೆಯಲ್ಲಿ ಎಲ್ಲೂ ಉಲ್ಲೇಖವಿರದ ಕಾರಣ ನಾವು ಈ ಬಗ್ಗೆ ಊಹೆಯನ್ನು ಮಾತ್ರ ಕಟ್ಟಬಹುದು.
2. 2019ರಲ್ಲಿ ತಮ್ಮ 97ನೇ ವಯಸ್ಸಿನಲ್ಲಿ ಈ ಪಾರಿತೋಷಕ ಪಡೆದ ಜಾನ್ ಗುಡೆನ್‌ಬರ್ಗ್ ಹಾಗೂ 2017ರಲ್ಲಿ ತನ್ನ 20ನೇ ವಯಸ್ಸಿನಲ್ಲಿ ಈ ಪಾರಿತೋಷಕ ಪಡೆದ ಮಲಾಲಾ ಯೂಸಫ್‌ಜ಼ಾಯ್ ಈ ಗೌರವಕ್ಕೆ ಪಾತ್ರರಾದ ಅತ್ಯಂತ ಹಿರಿಯ ಹಾಗೂ ಕಿರಿಯ ವ್ಯಕ್ತಿಗಳಾಗಿದ್ದಾರೆ.
3. ಈ ಪುರಸ್ಕಾರವನ್ನು ಮರಣಾನಂತರ ಕೊಡಲು ಬರುವುದಿಲ್ಲವೆಂದು 1974ರಲ್ಲಿ ನೊಬೆಲ್ ಪ್ರತಿಷ್ಠಾನ ನಿಯಮ ತಂದಿದೆ. ಆದರೆ ನೊಬೆಲ್ ಗೌರವವನ್ನು ಘೋಷಿಸಿದಾಗಿನಿಂದ ಕೊಡುವವರೆಗಿನ ಅವಧಿಯಲ್ಲಿ ಪಾರಿತೋಷಕಕ್ಕೆ ಭಾಜನರಾದ ವ್ಯಕ್ತಿ ಮೃತಪಟ್ಟಲ್ಲಿ ಪ್ರಶಸ್ತಿ ಪಡೆಯಬಹುದಾಗಿದೆ.
4. ತನ್ನ 120 ವರ್ಷಗಳ ಅಸ್ತಿತ್ವದಲ್ಲಿ ನೊಬೆಲ್ ಪ್ರಶಸ್ತಿಗೆ ಅಡಾಲ್ಫ್ ಹಿಟ್ಲರ್, ಜೋಸೆಫ್ ಸ್ಟಾಲಿನ್ ಮೂಲಕ ಮೈಕೆಲ್ ಜಾಕ್ಸನ್ ಸೇರಿದಂತೆ ಮಂದಿಯ ಹುಬ್ಬೇರಿಸುವ ಹೆಸರಗಳ ಶಿಫಾರಸುಗಳನ್ನೆಲ್ಲಾ ಕಂಡಿದೆ.
ಭಾರೀ ಹತ್ಯಾಕಾಂಡದ ಆಪಾದನೆ ಎದುರಿಸಿದ ಸರ್ಬಿಯಾದ ಅಧ್ಯಕ್ಷ ಸ್ಲೊಬೋಡನ್ ಮಿಲೋಸೆವಿಕ್‌ರನ್ನೂ ಈ ಪುರಸ್ಕಾರಕ್ಕೆ ಶಿಫಾರಸು ಮಾಡಲಾಗಿತ್ತು. ಫುಟ್ಬಾಲ್ ವಿಶ್ವಕಪ್‌ನ ಪಿತಾಮಹ ಜೂಲ್ಸ್ ರಿಮೆಟ್ ಹೆಸರು ಸಹ ನೊಬೆಲ್‌ಗೆ ಶಿಫಾರಸುಗೊಂಡಿತ್ತು.
5. ನೊಬೆಲ್ ಪುರಸ್ಕೃತರ ಸಂಖ್ಯೆಗಳು ಮೊದಲಿಗಿಂತ ಈಗ ಹೆಚ್ಚಾಗಿ ಕಂಡುಬರುತ್ತಿದ್ದರೂ ಸಹ ಒಟ್ಟಾರೆ ಪುರಸ್ಕೃತರ ಪೈಕಿ 6% ಮಾತ್ರವೇ ಮಹಿಳೆಯರಿದ್ದಾರೆ. 2001ರಿಂದ 28 ಮಹಿಳೆಯರಿಗೆ ಈ ಪ್ರಶಸ್ತಿ ಪ್ರದಾನ ಮಾಡಲಾಗಿದೆ. 2009ರಲ್ಲಿ ಐದು ಮಹಿಳೆಯರಿಗೆ ನೊಬೆಲ್ ಪುರಸ್ಕಾರ ಸಿಕ್ಕಿರುವುದು ಈವರೆಗಿನ ದಾಖಲೆಯಾಗಿದೆ.
6. ನೊಬೆಲ್ ಪ್ರಶಸ್ತಿಯನ್ನು ಎರಡು ಬಾರಿ ಗೆದ್ದ ಮೊದಲ ವ್ಯಕ್ತಿ ಮೇರಿ ಕ್ಯೂರಿ (1903ರಲ್ಲಿ ಭೌತಶಾಸ್ತ್ರದಲ್ಲಿ ಮತ್ತು 1911ರಲ್ಲಿ ರಸಾಯನಶಾಸ್ತ್ರದಲ್ಲಿ).