ದೇಶದ ಇತರ ಕ್ಷೇತ್ರಗಳ ಜೊತೆಗೆ ಕೃಷಿ ಕ್ಷೇತ್ರವೂ ಅತ್ಯಂತ ವೇಗವಾಗಿ ಬೆಳೆಯುತ್ತಿದೆ. ದೇಶದ ಯುವಜನತೆ ಕೂಡ ಕೃಷಿ ಬಗ್ಗೆ ಆಸಕ್ತಿ ತೋರುತ್ತಿದ್ದಾರೆ. ಲಕ್ಷಗಟ್ಟಲೆ ಸಂಬಳ ಬರುವ ಕೆಲಸ, ಮೆಟ್ರೋ ಸಿಟಿಗಳಲ್ಲಿನ ಐಷಾರಾಮಿ ಜೀವನ ಬಿಟ್ಟು ಹಳ್ಳಿಗೆ ವಾಪಸಾಗಿ ಅದೆಷ್ಟೋ ಯುವಕರು ವ್ಯವಸಾಯ ಆರಂಭಿಸಿದ್ದಾರೆ. ಯಶಸ್ವಿ ಕೃಷಿಕರಾಗಿದ್ದಾರೆ. ರಾಜಸ್ಥಾನದ ಭಿಲ್ವಾರಾ ಜಿಲ್ಲೆಯ ನಿವಾಸಿ ಅಭಿಷೇಕ್ ಜೈನ್ ಕೂಡ ಅವರಲ್ಲೊಬ್ಬರು. ಸಾಂಪ್ರದಾಯಿಕ ಕೃಷಿಯನ್ನು ಯಶಸ್ವಿ ಉದ್ಯಮವಾಗಿ ಪರಿವರ್ತಿಸಿದ್ದಾರೆ. ಅಭಿಷೇಕ್ ಜೈನ್ ‘ಲೆಮನ್ ಕಿಂಗ್’ ಎಂದೇ ಪ್ರಸಿದ್ಧಿ ಪಡೆದಿದ್ದಾರೆ.
ಕಾಮರ್ಸ್ ಓದಿದ್ದ ಅಭಿಷೇಕ್, ನಂತರ ತಮ್ಮದೇ ಕಂಪನಿಯನ್ನು ತೆರೆದರು. ತಂದೆಯ ಹಠಾತ್ ನಿಧನದ ನಂತರ ಅಭಿಷೇಕ್ ಕಂಪನಿಯನ್ನು ಮುಚ್ಚಿ ಕೃಷಿ ಲೋಕಕ್ಕೆ ಕಾಲಿಟ್ಟರು. ಈ ಬದಲಾವಣೆಯು ತಮ್ಮನ್ನು ಯಶಸ್ಸಿನ ಹಾದಿಯಲ್ಲಿ ಕರೆದೊಯ್ಯುತ್ತದೆ ಎಂದು ಅವರಿಗೆ ತಿಳಿದಿರಲಿಲ್ಲ.
ಅಭಿಷೇಕ್‌ಗೆ ಯಾರೂ ಮಾರ್ಗದರ್ಶಕರಿರಲಿಲ್ಲ. ಆದ್ದರಿಂದ ಆರಂಭದಲ್ಲಿ ಸಾಕಷ್ಟು ಸವಾಲುಗಳನ್ನು ಎದುರಿಸಬೇಕಾಯಿತು. ಪೇರಲ ತೋಟದಲ್ಲಿ ದಾಳಿಂಬೆ ಗಿಡಗಳನ್ನು ನೆಟ್ಟರು. ಆದರೆ ಅದು ಕೂಡ ಫಲ ಕೊಡಲಿಲ್ಲ. ಸದ್ಯ ಅಭಿಷೇಕ್ 6 ಎಕರೆ ಜಮೀನಿನಲ್ಲಿ ಕೃಷಿ ಮಾಡ್ತಿದ್ದಾರೆ. ನಾಲ್ಕು ಎಕರೆಯಲ್ಲಿ ನಿಂಬೆ, ಒಂದೂವರೆ ಎಕರೆಯಲ್ಲಿ ಪೇರಲ, ಅರ್ಧ ಎಕರೆಯಲ್ಲಿ ಗೋಶಾಲೆ ಇದೆ. ಅಷ್ಟೇ ಅಲ್ಲ ಆಹಾರ ಸಂಸ್ಕರಣೆಯನ್ನೂ ಆರಂಭಿಸಿ ಉಪ್ಪಿನಕಾಯಿ ಉತ್ಪಾದನೆ ಮಾಡುತ್ತಿದ್ದಾರೆ.
ಅಭಿಷೇಕ್ ತಮ್ಮದೇ ಬ್ರಾಂಡ್ ‘ಪಿಕಲ್ ಜಂಕ್ಷನ್’ ಅನ್ನು ಪ್ರಾರಂಭಿಸಿದ್ದಾರೆ. ಇದು ಕೇವಲ ಸ್ಥಳೀಯ ಮಾರುಕಟ್ಟೆಗೆ ಸೀಮಿತವಾಗಿಲ್ಲ. ಅಮೆಜಾನ್‌ನಲ್ಲಿ ಸಹ ಈ ಉಪ್ಪಿನಕಾಯಿ ಮಾರಾಟವಾಗ್ತಿದೆ. ಇದರಿಂದಾಗಿ ಗ್ರಾಹಕರು ಹೆಚ್ಚಿದ್ದಾರೆ ಮತ್ತು ಅವರ ವ್ಯಾಪಾರವೂ ವಿಸ್ತರಿಸುತ್ತಿದೆ.
ನಿಂಬೆ ಬೆಳೆಯಲ್ಲಿ ಸುಮಾರು 20 ಪ್ರತಿಶತ ಉಪ್ಪಿನಕಾಯಿ ತಯಾರಿಕೆಗೆ ಹೋಗುತ್ತದೆ, ಉಳಿದವು ಮಾರುಕಟ್ಟೆಯಲ್ಲಿ ಮಾರಾಟವಾಗುತ್ತದೆ. ಅಭಿಷೇಕ್ ಅವರ ತೋಟದಲ್ಲಿ ಅನೇಕ ವಿಧದ ನಿಂಬೆಹಣ್ಣುಗಳಿವೆ. ಅವುಗಳಲ್ಲಿ ಬಹುವಾರ್ಷಿಕ ವಿಧ ಮತ್ತು ತೆಳುವಾದ ಚರ್ಮದ ‘ಪೇಪರ್’ ನಿಂಬೆಹಣ್ಣುಗಳು ಸೇರಿವೆ. ಪೇರಲದಲ್ಲೂ ಸಾಕಷ್ಟು ವಿಧಗಳಿದ್ದು ಅಪರೂಪದ ‘ಬರಾಖಾನಾ’ ತಳಿಯೂ ಇದೆ. ಯಶಸ್ವಿ ಕೃಷಿಕ ಎನಿಸಿಕೊಂಡಿರೋ ಅಭಿಷೇಕ್ ಸದ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಸ್ತಿದ್ದಾರೆ.