ಪ್ಲೇಟ್ಲೆಟ್ಗಳು ರಕ್ತದಲ್ಲಿ ಕಂಡುಬರುವ ಸಣ್ಣ ರಕ್ತ ಕಣಗಳಾಗಿವೆ. ಪ್ಲೇಟ್‌ಲೆಟ್ ರಕ್ತ ಹೆಪ್ಪುಗಟ್ಟುವಿಕೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿ ಪ್ಲೇಟ್ಲೆಟ್ಸ್ ಸಂಖ್ಯೆ ಕಡಿಮೆಯಿದ್ದರೆ ಅಧಿಕ ರಕ್ತಸ್ರಾವದ ಅಪಾಯವಿರುತ್ತದೆ.
ಕಡಿಮೆ ಪ್ಲೇಟ್ಲೆಟ್ ಎಣಿಕೆಯನ್ನು ಥ್ರಂಬೋಸೈಟೋಪೆನಿಯಾ ಎಂದೂ ಕರೆಯುತ್ತಾರೆ. ಇದು ಆನುವಂಶಿಕ ಅಂಶಗಳಿಂದ ಕೂಡ ಸಂಭವಿಸುತ್ತದೆ, ಆದರೆ ಅಂತಹ ಪ್ರಕರಣಗಳು ಬಹಳ ಅಪರೂಪ. ಆದರೆ ಡೆಂಗ್ಯೂ, ಲ್ಯುಕೇಮಿಯಾ, ಕ್ಯಾನ್ಸರ್ ಇನ್ನಿತರ ಕಾಯಿಲೆಗಳಿಂದ ಪ್ಲೇಟ್ಲೆಟ್ ಕೌಂಟ್ ಕಡಿಮೆಯಾಗುತ್ತದೆ.
ದೇಹದಲ್ಲಿ ಪ್ಲೇಟ್ಲೆಟ್ ಕೌಂಟ್ ಎಷ್ಟಿರಬೇಕು?
ಪುರುಷರಲ್ಲಿ ಸಾಮಾನ್ಯ ಪ್ಲೇಟ್‌ಲೆಟ್ ಎಣಿಕೆ ವ್ಯಾಪ್ತಿಯು ಪ್ರತಿ ಮೈಕ್ರೋಲೀಟರ್‌ಗೆ 150,000 ರಿಂದ 450,000 ಇರಬೇಕು. ಮಹಿಳೆಯರಲ್ಲಿ ಪ್ರತಿ ಮೈಕ್ರೋಲೀಟರ್‌ಗೆ 150,000 ರಿಂದ 350,000 ಇರಬೇಕು. ಸಂಪೂರ್ಣ ರಕ್ತ ಪರೀಕ್ಷೆ (ಸಿಬಿಸಿ) ಮೂಲಕ ಇದನ್ನು ಪತ್ತೆ ಮಾಡಬಹುದು.
ಪ್ಲೇಟ್ಲೆಟ್ ಕುಸಿತದ ಲಕ್ಷಣಗಳು
ಮೂಗು ಅಥವಾ ಒಸಡುಗಳಿಂದ ರಕ್ತಸ್ರಾವ
ಸುಲಭವಾಗಿ ಗಾಯಗೊಳ್ಳುವುದು ಮತ್ತು ಚರ್ಮದ ಬಣ್ಣ ನೀಲಿಯಾಗುವುದು
ಮುಟ್ಟಿನಲ್ಲಿ ಭಾರೀ ರಕ್ತಸ್ರಾವ
ಕಪ್ಪು ಅಥವಾ ರಕ್ತಸಿಕ್ತ ಮಲ
ಚರ್ಮದ ಅಡಿಯಲ್ಲಿ ಸಣ್ಣ ಕೆಂಪು ಕಲೆಗಳು
ಪ್ಲೇಟ್ಲೆಟ್‌ಗಳು ಕಡಿಮೆಯಾಗಿರುವುದರ ಹಿಂದಿನ ಕಾರಣದ ಆಧಾರದಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಸೋಂಕಿನಿಂದ ಪ್ಲೇಟ್ಲೆಟ್ಸ್ ಕುಸಿದಿದ್ದರೆ ಎಂಟಿ ಬಯೊಟಿಕ್ಸ್ ಅಥವಾ ಇತರ ಔಷಧಿಗಳನ್ನು ನೀಡಬಹುದು. ಸ್ವಯಂ ನಿರೋಧಕ ಕಾಯಿಲೆಯಿಂದ ಈ ಸಮಸ್ಯೆಯಾಗಿದ್ದಲ್ಲಿ ಪ್ರತಿರಕ್ಷಣಾ ವ್ಯವಸ್ಥೆಯನ್ನು ನಿಗ್ರಹಿಸುವ ಔಷಧಿಗಳನ್ನು ನೀಡಬಹುದು. ಕ್ಯಾನ್ಸರ್‌ನಿಂದ ಆಗಿದ್ದಲ್ಲಿ ಅದಕ್ಕೆ ಚಿಕಿತ್ಸೆ ನೀಡಲಾಗುತ್ತದೆ.
ದೇಹದಲ್ಲಿ ಪ್ಲೇಟ್‌ಲೆಟ್‌ಗಳ ಪ್ರಮಾಣ ಕಡಿಮೆಯಿದ್ದರೆ ಕೆಲವು ಪದಾರ್ಥಗಳನ್ನು ಸೇವನೆ ಮಾಡಬಾರದು. ಆಲ್ಕೋಹಾಲ್, ಕರಿದ ಪದಾರ್ಥಗಳು, ರೆಡ್ ಮೀಟ್, ಹೆಚ್ಚಿನ ಸೋಡಿಯಂ ಆಹಾರಗಳು, ಬೆಳ್ಳುಳ್ಳಿ, ಈರುಳ್ಳಿ, ಟೊಮೆಟೊ, ಅರಿಶಿನ, ಶುಂಠಿ, ಹೆಚ್ಚಿನ ಗ್ಲೈಸೆಮಿಕ್ ಇಂಡೆಕ್ಸ್ ಆಹಾರಗಳನ್ನು ಸೇವಿಸಬಾರದು. ಈ ಆಹಾರಗಳು ದೇಹದಲ್ಲಿ ರಕ್ತವನ್ನು ಮತ್ತಷ್ಟು ದುರ್ಬಲಗೊಳಿಸಲು ಮತ್ತು ಹೆಪ್ಪುಗಟ್ಟುವಿಕೆಯನ್ನು ತಡೆಯಲು ಕೆಲಸ ಮಾಡುತ್ತವೆ.