ಕೆರಿಬಿಯನ್ನರ ನೆಲದಲ್ಲಿ ಟಿ20 ವಿಶ್ವಕಪ್ ಗೆದ್ದಿರುವ ಟೀಂ ಇಂಡಿಯಾಕ್ಕೆ ಪ್ರಶಂಸೆ ಮತ್ತು ಹಣದ ಹೊಳೆಯೇ ಹರಿದುಬರ್ತಿದೆ. ವಿಶ್ವವಿಜೇತ ಭಾರತ ತಂಡಕ್ಕೆ ಬಿಸಿಸಿಐ 125 ಕೋಟಿ ರೂಪಾಯಿ ನಗದು ಬಹುಮಾನವನ್ನು ಈಗಾಗ್ಲೇ ಘೋಷಿಸಿದೆ. ತಂಡದ ಎಲ್ಲಾ ಆಟಗಾರರು ಮತ್ತು ಕೋಚ್ ನಡುವೆ ಈ ಹಣ ಹೇಗೆ ಹಂಚಿಕೆಯಾಗುತ್ತದೆ ಎಂಬುದು ಇಂಟ್ರೆಸ್ಟಿಂಗ್ ಸಂಗತಿ.
ಕೋಚ್ ರಾಹುಲ್ ದ್ರಾವಿಡ್ ಹಾಗೂ ರೋಹಿತ್ ಶರ್ಮಾ ಸೇರಿದಂತೆ ಒಟ್ಟಾರೆ 15 ಆಟಗಾರರಿಗೆ ತಲಾ 5 ಕೋಟಿ ರೂಪಾಯಿ ಸಿಗಲಿದೆ. ಗುರುವಾರ ಮುಂಬೈನ ವಾಂಖೇಡೆ ಮೈದಾನದಲ್ಲಿ ನಡೆದ ಅದ್ಧೂರಿ ಸಮಾರಂಭದಲ್ಲಿ ಪ್ರಶಸ್ತಿ ವಿತರಿಸಲಾಗಿದೆ. ಮೂಲಗಳ ಪ್ರಕಾರ ಉಳಿದ ತರಬೇತುದಾರರಿಗೆ ತಲಾ 2.5 ಕೋಟಿ ರೂಪಾಯಿ ನೀಡಲಾಗುತ್ತದೆ. ಇನ್ನುಳಿದ ಸಿಬ್ಬಂದಿಗೆ ತಲಾ 2 ಕೋಟಿ ರೂಪಾಯಿ ಸಿಗಲಿದೆ. ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಸದಸ್ಯರಿಗೆ ತಲಾ 1 ಕೋಟಿ ರೂಪಾಯಿ ನೀಡಲಾಗುತ್ತದೆ.
ಯಾರ್ಯಾರಿಗೆ ಎಷ್ಟೆಷ್ಟು ನಗದು ಬಹುಮಾನ?
ಕೋಚ್ ರಾಹುಲ್ ದ್ರಾವಿಡ್ ಸೇರಿ 15 ಆಟಗಾರರ ತಂಡಕ್ಕೆ ತಲಾ 5 ಕೋಟಿ.
ಬ್ಯಾಟಿಂಗ್ ಕೋಚ್ ವಿಕ್ರಂ ರಾಥೋಡ್, ಬೌಲಿಂಗ್ ಕೋಚ್ ಪರಸ್, ಫೀಲ್ಡಿಂಗ್ ಕೋಚ್ ಟಿ.ದಿಲೀಪ್‌ಗೆ ತಲಾ 2.5 ಕೋಟಿ.
ಫಿಸಿಯೋಥೆರಪಿಸ್ಟ್‌ಗಳಾದ ಕಮಲೇಶ್ ಜೈನ್, ಯೋಗೇಶ್ ಪಾರ್ಮರ್, ತುಳಸಿ ರಾಮ್ ಯುವರಾಜ್‌ಗೆ 2 ಕೋಟಿ, ಥ್ರೋಡೌನ್ ಸ್ಪೆಷಲಿಸ್ಟ್‌ಗಳಾದ ರಾಘವೇಂದ್ರ ದ್ವಗಿ, ನುವಾನ್ ಉಡೆನೆಕೆ, ದಯಾನಂದ ಗರಣಿಗೆ ತಲಾ 2 ಕೋಟಿ, ಸ್ಟ್ರೆಂತ್ ಮತ್ತು ಕಂಡಿಷನಿಂಗ್ ಕೋಚ್‌ಗಳಾದ ರಾಜೀವ್ ಕುಮಾರ್, ಅರುಣ್ ಕಾನಡೆ ಹಾಗೂ ಸೋಹಂ ದೇಸಾಯಿ ಅವರಿಗೆ ತಲಾ 2 ಕೋಟಿ.
ಅಜಿತ್ ಅಗರ್ಕರ್, ಶಿವಸುಂದರ್ ದಾಸ್, ಸುಬ್ರತೋ ಬ್ಯಾನರ್ಜಿ, ಸಲೀಲ್ ಅಂಕೋಲ, ಶ್ರೀಧರನ್ ಶರತ್‌ಗೆ ತಲಾ 1 ಕೋಟಿ.
ರಿಂಕು ಸಿಂಗ್, ಶುಭಮನ್ ಗಿಲ್, ಆವೇಶ್ ಖಾನ್, ಖಲೀಲ್ ಅಹಮದ್‌ಗೆ ತಲಾ 1 ಕೋಟಿ.